
ಹೈದರಾಬಾದ್: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಸಂಬಂಧ ಹೈದರಾಬಾದ್ ವಿವಿ ಕುಲಪತಿ ಅಪ್ಪಾರಾವ್ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಬುಧವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.
ಅಪ್ಪಾರಾವ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾಲಯದ ಆವರಣದ ಒಳಗೆ ಮತ್ತು ಹೊರಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿದ್ಯಾರ್ಥಿಗಳು ಅಪ್ಪಾರಾವ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು, ಈ ವೇಳೆ ಪೊಲೀಸರು ವಶಕ್ಕೆ ಹಲವು ವಿದ್ಯಾರ್ಥಿಗಳನ್ನು ಪಡೆದಿದ್ದಾರೆ.
ಎರಡು ತಿಂಗಳ ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿರುವ ಅಪ್ಪಾರಾವ್ ಅವರ ಕಚೇರಿಯ ಪೀಠೋಪಕರಣಗಳನ್ನು ಕೆಲ ವಿದ್ಯಾರ್ಥಿಗಳು ಧ್ವಂಸಗೊಳಿಸಿದ್ದಾರೆ.
Advertisement