
ಕೇರಳ: ಎಸಿ ಬಳಕೆ ಮಾಡಿದ್ದಕ್ಕೆ ಕರೆಂಟ್ ಬಿಲ್ ಜಾಸ್ತಿಯಾಗುತ್ತದೆಂದು 85 ವರ್ಷದ ವೃದ್ಧನೊಬ್ಬ 74 ವರ್ಷದ ತನ್ನ ಪತ್ನಿ ಹಾಗೂ 54 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಪೌಲ್ ಎಂಬ ವ್ಯಕ್ತಿ ಪತ್ನಿ, ಮಗನನ್ನು ಹತ್ಯೆ ಮಾಡಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿರುವ ಪೌಲ್ ರೈಲ್ವೆ ಇಲಾಖೆ ಮಾಜಿ ನೌಕರನಾಗಿದ್ದು ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮನೆಯಲ್ಲಿ ನಡೆದ ಅವಗಢದ ಬಗ್ಗೆ ಕತಾರ್ ನಲ್ಲಿರುವ ತನ್ನ ಮತ್ತೋರ್ವ ಪುತ್ರನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಪೌಲ್ ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಪೌಲ್ ನ
ಮತ್ತೋರ್ವ ಮಗ ಹತ್ತಿರದಲ್ಲೆ ಇದ್ದ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಮನೆಯಲ್ಲಿ ಹೆಚ್ಚು ವಿದ್ಯುತ್ ಬಿಲ್ ಬರುತ್ತಿದ್ದ ಕಾರಣ ಪೌಲ್ ತನ್ನ ಪತ್ನಿ ಹಾಗೂ ಅನಾರೋಗ್ಯಕ್ಕೀಡಾಗಿದ್ದ ಮಗನಿಗೆ ಎಸಿಯನ್ನು ಹೆಚ್ಚು ಬಳಸದಂತೆ ಎಚ್ಚರಿಕೆ ನೀಡಿದ್ದರು. ಆದರೆ ಎಚ್ಚರಿಕೆಯ ಹೊರತಾಗಿಯೂ ಎಸಿ ಬಳಸಿದ್ದಾರ ಪರಿಣಾಮ ಮಗ ಹಾಗೂ ಪತ್ನಿಯ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಾದ ಬೆನ್ನಲ್ಲೇ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ವಯೋಸಹಜ ನಿಶಕ್ತಿಯಿಂದಾಗಿ ನೇಣುಬಿಗಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement