ಶ್ರೀನಗರ: ಶ್ರೀನಗರದಲ್ಲಿರುವ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ(ಎನ್ಐಟಿ)ಯನ್ನು ಕಾಶ್ಮೀರದಿಂದ ಸ್ಥಳಾಂತರಿಸಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಲಾಯದ ಅಧಿಕಾರಿಗಳು ಶನಿವಾರ ತಿರಸ್ಕಿರಿಸಿದ್ದಾರೆ. ಆದರೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ರಾತ್ರಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕೆಲವು ಅಧಿಕಾರಿಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರನ್ನು ಭೇಟಿ ಮಾಡಿದ ಹೊರಗಿನ ವಿದ್ಯಾರ್ಥಿಗಳ ತಂಡ ಸಂಸ್ಥೆಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿದರು. ಈ ವೇಳೆ ಎನ್ಐಟಿಯನ್ನು ಕಾಶ್ಮೀರದಿಂದ ಸ್ಥಳಾಂತರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
ಎನ್ಐಟಿಯನ್ನು ಕಾಶ್ಮೀರದಿಂದ ಸ್ಥಳಾಂತರಿಸಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಇಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಸುಮಾರು 150 ವಿದ್ಯಾರ್ಥಿಗಳು ದೆಹಲಿಯಿಂದ ಶ್ರೀನಗರಕ್ಕೆ ಯಾತ್ರೆ ನಡೆಸುತ್ತಿದ್ದಾರೆ
12 ರಾಜ್ಯಗಳ ಸುಮಾರು 150 ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು 'ಚಲೋ ಎನ್‌ಐಟಿ' ಎಂಬ ಹೆಸರಿನ ಯಾತ್ರೆಯನ್ನು ಶನಿಮಾರ ಕೈಗೊಂಡಿದ್ದಾರೆ. ಬೈಕ್, ಕಾರು ಮತ್ತು ಬಸ್‌ಗಳಲ್ಲಿ ದೆಹಲಿಯಿಂದ ಶ್ರೀನಗರದವರೆಗಿರುವ ಯಾತ್ರೆ ಇದಾಗಿದೆ.