
ತಿರುವನಂತಪುರ: ಕೇರಳದ ಕೊಲ್ಲಂ ಮೂಕಾಂಬಿಕಾ ದೇಗುಲದಲ್ಲಿ ಶನಿವಾರ ನಡೆದ ಘೋರ ಅಗ್ನಿ ದುರಂತವನ್ನು ಮೊದಲೇ ಶಂಕಿಸಿದ್ದ ಕುಟುಂಬವೊಂದು ದೂರು ನೀಡಿದ್ದ ಅಂಶ ಬೆಳಕಿಗೆ ಬಂದಿದೆ.
ಘೋರ ಅಗ್ನಿ ದುರಂತಕ್ಕೆ ಸಾಕ್ಷಿಯಾದ ಕೊಲ್ಲಂನ ಪುತ್ತಿಂಗಲ್ ನಲ್ಲಿರುವ ಮೂಕಾಂಬಿಕಾ ದೇಗುಲದ ಪಟಾಕಿ ಸಿಡಿಸುವ ಕಾರ್ಯಕ್ರಮ ಮುಂದೊಂದು ದಿನ ಘೋರ ದುರಂತಕ್ಕೆ ಕಾರಣವಾಗುತ್ತದೆ ಎಂದು ಮೊದಲೇ ಎಣಿಸಿದ್ದ ಕುಟುಂಬವೊಂದು ಈ ಬಗ್ಗೆ ದೇವಾಲಯದ ಸಿಬ್ಬಂದಿ ವಿರುದ್ಧ ದೂರು ನೀಡಿದ್ದ ವಿಚಾರ ಇದೀಗ ಬಹಿರಂಗವಾಗಿದೆ.
ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ದೇಗಲದಿಂದ ಕೂಗಳತೆ ದೂರದಲ್ಲೇ ಇರುವ ಮನೆಯಲ್ಲಿ ನೆಲೆಸಿರುವ ಪಂಕಜಾಕ್ಷಿ ಎನ್ನುವವರು ದೇಗುಲದ ಪಟಾಕಿ ಸಿಡಿಸಿವು ಕಾರ್ಯಕ್ರಮದ ವಿರುದ್ಧ ತಾವು ಹಲವು ಬಾರಿ ದೂರು ನೀಡಿದ್ದೆವು. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಯಾರೂ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ದೇವಾಲಯದ ಸಿಬ್ಬಂದಿಗಳೇ ತಮಗೆ ಬೆದರಿಕೆ ಹಾಕುವ ಮೂಲಕ ನಮ್ಮನ್ನು ಸುಮ್ಮನಾಗಿಸಿದ್ದರು ಎಂದು ಪಂಕಜಾಕ್ಷಿ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿರುವ ಪಂಕಜಾಕ್ಷಿ ಅವರು, ವರ್ಷದಲ್ಲಿ ಎರಡು ಬಾರಿ ಮಾತ್ರ ಭಾರತಕ್ಕೆ ಬಂದು ಹೋಗುತ್ತಾರೆ. ಪಂಕಜಾಕ್ಷಿ ಅವರ ನಿವಾಸ ಕೊಲ್ಲಂನ ಮೂಕಾಂಬಿಕಾ ದೇವಾಲಯದಿಂದ ಕೇವಲ 25 ಮೀಟರ್ ದೂರದಲ್ಲಿದ್ದು, ಪ್ರತೀ ವರ್ಷ ಪಟಾಕಿ ಸಿಡಿಸುವ ಆಚರಣೆ ವೇಳೆ ಇವರ ಮನೆಗೆ ಸಾಕಷ್ಟು ತೊಂದರೆಯಾಗುತ್ತದೆ ಎಂದು ಪಂಕಜಾಕ್ಷಿ ಅವರು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಾವು ಸಾಕಷ್ಟು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಕಜಾಕ್ಷಿ ಆರೋಪಿಸಿದ್ದಾರೆ.
ಅಲ್ಲದೆ ದೂರುದಾರೆ ಪಂಕಜಾಕ್ಷಿಗೆ ದೇಗುಲದ ಸಿಬ್ಬಂದಿ ಮತ್ತು ಕಂಬಮ್ ಕಾರ್ಯಕ್ರಮ ಆಯೋಜಕರು ದೇಗುಲ ಪ್ರವೇಶವನ್ನು ನಿಷೇಧಿಸಿದ್ದರು ಎಂದು ಅವರು ಹೇಳಿದ್ದಾರೆ.
"ನಮ್ಮ ಮನೆ ದೇಗುಲದಿಂದ ಕೇವಲ 25 ಮೀಟರ್ ದೂರದಲ್ಲಿದ್ದು, ಪ್ರತೀವರ್ಷ ಇಲ್ಲಿ ಆಚರಿಸಲಾಗುವ ಕಂಬಮ್ ನಿಂದಾಗಿ ಸಾಕಷ್ಟು ಶಬ್ಧ ಮಾಲೀನ್ಯ, ವಾಯು ಮಾಲೀನ್ಯ ಹಾಗೂ ನಮ್ಮ ಮನೆಗಳಿಗೂ ಹಾನಿಯಾಗುತ್ತದೆ. ಎರಡು ಗುಂಪುಗಳು ಸೇರಿ ಪರಸ್ಪರ ಸ್ಪರ್ಧೆಗಿಳಿದು ಪಟಾಕಿ ಸಿಡಿಸುತ್ತಾರೆ. ಹೀಗಾಗಿ ಆಚರಣೆ ವೇಳೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಂಗ್ರಹಿಸಿ ಸಿಡಿಸುತ್ತಾರೆ. ಹೀಗೆ ಪಟಾಕಿ ಸಿಡಿಸುವುದರಿಂದ ನಮಗೆ ಸಾಕಷ್ಟು ಬಾರಿ ತೊಂದರೆಯಾಗಿತ್ತು. ಈ ಬಗ್ಗೆ ನಾನೂ ಕೂಡ ಸಂಬಂಧ ಪಟ್ಟಿ ಆಧಿಕಾರಿಗಳಿಗೆ ದೂರು ನೀಡಿದ್ದೆ. ಕೆಲವರು ಈ ಬಗ್ಗೆ ವಿಚಾರಿಸುವುದಾಗಿ ಹೇಳಿ ಸುಮ್ಮನಾಗುತ್ತಿದ್ದರು. ಮತ್ತೆ ಕೆಲವರು ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಹೋಗುತ್ತಿದ್ದರು. ಆದರೆ ಈ ವರೆಗೂ ಯಾರೂ ಕೂಡ ಕ್ರಮ ಕೈಗೊಂಡಿಲ್ಲ. ಬದಲಿಗೆ ದೇಗುಲದ ಸಿಬ್ಬಂದಿ ದೂರು ನೀಡಿದ್ದಕ್ಕಾಗಿ ನನಗೆ ಬೆದರಿಕೆ ಕೂಡ ಹಾಕಿದ್ದರು ಮತ್ತು ನನ್ನ ಮಗಳನ್ನೂ ಥಳಿಸಿದ್ದರು" ಎಂದು ಸುದ್ದಿ ಸಂಸ್ಥೆಯೊಂದಿಗೆ ಪಂಕಜಾಕ್ಷಿ ಹೇಳಿಕೊಂಡಿದ್ದಾರೆ
ಒಟ್ಟಾರೆ ಅಧಿಕಾರಿಗಳ ಸಣ್ಣ ನಿರ್ಲಕ್ಷ್ಯದಿಂದಾಗಿ ನಿನ್ನೆ ಸಂಭವಿಸಿದ ಘೋರ ಅಗ್ನಿ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಆಡಳಿತದ ನಿಷೇಧವಿದ್ದರೂ ಕಾನೂನು ಮೀರಿ ಕಾರ್ಯಕ್ರಮ ಆಯೋಜಿಸಿದ ದೇಗುಲದ ಆಡಳಿತ ಮಂಡಳಿಯೇ ಈ ಭಾರಿ ದುರಂತಕ್ಕೆ ಹೊಣೆ ಎಂದು ಹೇಳಲಾಗುತ್ತಿದೆ.
Advertisement