
ಡಿಸ್ಪುರ್: ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಯುವರಾಣಿ ಕೇಟ್ ಮಿಡ್ಲ್ ಟನ್ ನಾಳೆಯಿಂದ ಎರಡು ದಿನಗಳ ಕಾಲ ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ರಾಜ್ಯ ಸಜ್ಜಾಗಿದೆ.
ರಾಜಕುಮಾರ ಮತ್ತು ರಾಣಿಯ ಭೇಟಿಯನ್ನು ಸ್ಮರಣೀಯ ಕ್ಷಣವನ್ನಾಗಿಸಲು ಮತ್ತು ಅವರು ಹಿಂತಿರುಗಿ ಹೋಗುವಾಗ ಅಸ್ಸಾಂನಲ್ಲಿ ಕಳೆದ ಉತ್ತಮ ನೆನಪುಗಳನ್ನು ಕೊಂಡೊಯ್ಯುವಂತೆ ನೋಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ತರುಣ್ ಗೋಗೊಯ್ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಅವರು ವಿಶ್ವ ಪಾರಂಪರಿಕ ಖಡ್ಗಮೃಗ ತಾಣವಾದ ಕಜ್ಹಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಜ್ಹಿರಂಗದ ರೆಸಾರ್ಟ್ ವೊಂದರಲ್ಲಿ ಉಳಿದುಕೊಳ್ಳಲಿದ್ದು, ಅಲ್ಲಿ ಅವರನ್ನು ಅಸ್ಸಾಂನ ಸಾಂಪ್ರದಾಯಿಕ ಬಿಹು ಮತ್ತು ಜುಮುರ್ ನೃತ್ಯದ ಮೂಲಕ ಬರಮಾಡಿಕೊಳ್ಳಲಾಗುತ್ತಿದೆ. ಹೊಟೇಲ್ ನ ನೌಕರರು ರಾಜಕುಮಾರ ಮತ್ತು ರಾಣಿ ದಂಪತಿಗೆ ಆತಿಥ್ಯ ನೀಡಲು ಸಾಂಪ್ರದಾಯಿಕ ಆಹಾರಗಳ ಮೆನುವನ್ನು ಸಿದ್ಧಪಡಿಸಿದ್ದಾರೆ. ಖಾದ್ಯದ ಜೊತೆ ವಿಶ್ವದ ಖಾರವಾದ ಮೆಣಸು ಜೊಲಾಕಿಯಾವನ್ನು ಉಣಬಡಿಸಲಿದ್ದಾರೆ.ಅವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದು ಹೊಟೇಲ್ ನ ಮುಖ್ಯ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಶರ್ಮ ಹೇಳುತ್ತಾರೆ.
ಪ್ರಿನ್ಸ್ ವಿಲಿಯಮ್ ನಂತರ ಮಾಧ್ಯಮದವರ ಜೊತೆ ಸಂವಾದ ನಡೆಸಲಿದ್ದಾರೆ. ಅವರ ಜೊತೆ ಬ್ರಿಟನ್ ಪೊಲೀಸರು, ಪ್ರಚಾರಾಧಿಕಾರಿ, ಇಬ್ಬರು ಪತ್ರಕರ್ತರು ಇರಲಿದ್ದಾರೆ. ಉದ್ಯಾನವನ, ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷ, ಪ್ರಾಣಿಗಳನ್ನು ಬೇಟೆಗಾರರಿಂದ ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಬ್ರಿಟನ್ ರಾಜಕುಮಾರ ಮತ್ತು ರಾಜಕುಮಾರಿ ಭೇಟಿ ನೀಡುವ ಸುದ್ದಿ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲ ಗ್ರಾಮಗಳ ಜನರಿಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು, ನೋಡಲು ಕಾತರರಿಂದ ಪುಳಕಿತರಾಗಿದ್ದಾರೆ.
Advertisement