ಕೇರಳ ದೇವಾಲಯದಲ್ಲಿ ರಾತ್ರಿವೇಳೆ ಪಟಾಕಿಗೆ ಹೈಕೋರ್ಟ್‌ ನಿಷೇಧ

ಕೇರಳದ ಎಲ್ಲಾ ದೇವಾಲಯಗಳಲ್ಲಿ ರಾತ್ರಿ ವೇಳೆ ದೊಡ್ಡ ಪ್ರಮಾಣದ ಸಿಡಿಮದ್ದುಗಳನ್ನು ಸುಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಂಗಳವಾರ....
ಪಟಾಕಿ ಸ್ಫೋಟಗೊಂಡ ಸ್ಥಳ
ಪಟಾಕಿ ಸ್ಫೋಟಗೊಂಡ ಸ್ಥಳ
ತಿರುವನಂತಪುರಂ: ಕೇರಳದ ಎಲ್ಲಾ ದೇವಾಲಯಗಳಲ್ಲಿ ರಾತ್ರಿ ವೇಳೆ ದೊಡ್ಡ ಪ್ರಮಾಣದ ಸಿಡಿಮದ್ದುಗಳನ್ನು ಸುಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಅತ್ಯಧಿಕ ಸದ್ದಿನ ಸುಡುಮದ್ದುಗಳನ್ನು ನಿಷೇಧಿಸುವಂತೆ ಕೋರಿ ಜಸ್ಟಿಸ್‌ ಚಿದಂಬರೇಶ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಭಾರಿ ಅಗ್ನಿ ದುರಂತದೊಂದಿಗೆ ಪರ್ಯವಸಾನಗೊಂಡ ಪುಟ್ಟಿಂಗಲ್ ದೇವಾಲಯದಲ್ಲಿ ಭಾರಿ ಪ್ರಮಾಣದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟದ್ದಕ್ಕಾಗಿ ಹೈಕೋರ್ಟ್ ಒಮನ್ ಚಾಂಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ದೇವಾಲಯಗಳ ಅವರಣದಲ್ಲಿ ಸಿಡಿಮದ್ದು ಸಿಡಿಸಲು ಅನುಮತಿ ಕೊಡಲಾಗುವುದಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದಾಗ ‘ಅನುಮತಿ ಇಲ್ಲದೇ ಇದ್ದಾಗ ಸಿಡಿಮದ್ದು ಸಿಡಿಸುವುದು ಹೇಗೆ?’ ಎಂದು ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತು. ಸಿಡಿಮದ್ದು ಸಿಡಿಸುವ ಹೊತ್ತಿನಲ್ಲಿ ದೇವಸ್ಥಾನದ ಆವರಣದಲ್ಲಿ ಸಂಗ್ರಹಿಸಲಾಗಿದ್ದ ಸಿಡಿಮದ್ದು ಸಂಗ್ರಹಕ್ಕೆ ಬೆಂಕಿ ತಗುಲಿ ಸಂಭವಿಸಿದ ಭಾರಿ ಅಗ್ನಿದುರಂತದಲ್ಲಿ 110ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಮಧ್ಯೆ ಇಂದು ಬೆಳಗಿನ ಜಾವ ಶರಣಾಗತರಾದ ದೇವಾಲಯದ ಆಡಳಿತ ಮಂಡಳಿಯ 7 ಸದಸ್ಯರು ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com