
ನವದೆಹಲಿ: ಅಸ್ಸಾಂ ದೇವಾಲಯಕ್ಕೆ ಸೇರಿದ ಸುಮಾರು 400 ಕೋಟಿ ರು. ನಗದು, 300 ಕೆಜಿ ಚಿನ್ನ ಮತ್ತು ಮತ್ತಿತರ ಅತ್ಯಮೂಲ್ಯ ವಸ್ತುಗಳು ಭಯೋತ್ಪಾಕರ ಕೈಸೇರಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ ಎಂದು ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಸ್ಸಾಂನ ದಿಸ್ಪುರದಲ್ಲಿರುವ ದೇವಾಲಯವೊಂದರ ಖಜಾನೆ ದೇಶದ್ರೋಹಿಗಳ ಕೈಸೇರಿರುವ ಬಗ್ಗೆ ನಿವೃತ್ತ ಮಿಲಿಟರಿ ಗುಪ್ತಚರ ಅಧಿಕಾರಿ ಮನೋಜ್ ಕುಮಾರ್ ಕೌಶಲ್ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಅವರು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಿಐಎಲ್ ವಿಚಾರಣೆಗೆ ಪರಿಗಣಿಸಿರುವ ಸುಪ್ರೀಂಕೋರ್ಟ್, ಪ್ರಕರಣದ ಬಗ್ಗೆ ಮೇ 6ರ ಒಳಗಾಗಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಅರ್ಜಿಯಲ್ಲಿ ನಿವೃತ್ತ ಗುಪ್ತಚರ ಅಧಿಕಾರಿ ಮನೋಜ್ ಕುಮಾರ್ ಅರೋಪಿಸಿರುವಂತೆ ದೇಗುಲಕ್ಕೆ ಸೇರಿದ ಸುಮಾರು 400 ಕೋಟಿ ರು. ನಗದು, 300 ಕೆಜಿ ಚಿನ್ನ, ಎಕೆ47 ಶಸ್ತ್ರಾಸ್ತ್ರ ಮತ್ತು ಅತ್ಯಮೂಲ್ಯ ವಸ್ತುಗಳು ಉಗ್ರ ವಶವಾಗಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?:
ಅಸ್ಸಾಂ ರಾಜ್ಯದ ದಿಸ್ಪುರ ಸಮೀಪವಿರುವ ರಾಣಿ ಗಾರ್ಡನ್ ಚಹಾ ತೋಟದಲ್ಲಿರುವ ಕಾಳಿ ಮಂದಿರದ ನೆಲ ಮಾಳಿಗೆಯಲ್ಲಿ ಭಾರಿ ಮೊತ್ತದ ಖಜಾನೆ ಇತ್ತು ಎಂದು ಹೇಳಲಾಗುತ್ತಿದೆ. ಇದರ ಸಮೀಪದಲ್ಲೇ ಮೃದುಲ್ ಭಟ್ಟಾಚಾರ್ಯ ಎಂಬುವವರಿಗೆ ಸೇರಿದ ಚಹಾ ತೋಟವಿದ್ದು, ತೋಟದ ಮಾಲೀಕ 2002ರಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ 2014ರ ಜೂನ್ ನಲ್ಲಿ ಖಜಾನೆ ಹೊರತೆಗೆಯಲು ಸೇನೆ ಮುಂದಾಗಿತ್ತು. ಆದರೆ ಅಷ್ಟರಲ್ಲೇ ದುಷ್ಕರ್ಮಿಗಳು ದೇವಾಲಯದಲ್ಲಿ ಸುರಂಗ ಕೊರೆದು ಖಜಾನೆಯನ್ನು ಹೊತ್ತೊಯ್ದಿದ್ದರು.
ಆಶ್ಚರ್ಯಕರ ಅಂಶವೆಂದರೆ ಆದರೆ ಈ ಕುರಿತು ಅಲ್ಲಿನ ಪೊಲೀಸರು ಹೆಚ್ಚಿನ ತನಿಖೆ ನಡೆಸಲೇ ಇಲ್ಲ. ಘಟನಾ ಪ್ರದೇಶದಲ್ಲಿ ಉಲ್ಫಾ ಮತ್ತಿತರ ತೀವ್ರಗಾಮಿಗಳ ಪ್ರಭಾವ ಹೆಚ್ಚಾಗಿದ್ದು, ಮೂಲಗಳ ಪ್ರಕಾರ ತೋಟದ ಮಾಲೀಕ ಮೃದುಲ್ ಭಟ್ಟಾಚಾರ್ಯ ಕೂಡ ಉಗ್ರಗಾಮಿಗಳಿಗೆ ನಿಗದಿತ ಮೊತ್ತ ನೀಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ದೇವಾಲಯದ ಬಳಿಯೇ ಈ ನಿಧಿ ಹಾಗೂ ಎರಡು ಎಕೆ-47 ರೈಫಲ್ ಕಂಡಿದ್ದಾಗಿ 2015, ಮೇ 10ರಂದು ಮಾಹಿತಿದಾರನೊಬ್ಬ ತಿಳಿಸಿದ್ದ. ಇದೀಗ ಈ ಅಪಾರ ಪ್ರಮಾಣದ ನಿಧಿ ಕಾಣೆಯಾಗಿದ್ದು, ಈ ಸಂಪತ್ತು ಉಗ್ರರ ಕೈ ಸೇರಿರುವ ಶಂಕೆ ಇದೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ. ಅಲ್ಲದೆ ನಿಧಿ ನಾಪತ್ತೆಯ ಹಿಂದೆ ಸ್ಥಳೀಯ ಪ್ರಭಾವಿ ಮುಖಂಡ ಕೈವಾಡ ಕೂಡ ಇದೆ ಎಂದು ಆರೋಪಿಸಲಾಗಿದೆ.
ನಿಧಿಯನ್ನು ಉಗ್ರರು ಅಥವಾ ತೀವ್ರಗಾಮಿಗಳು ಅಪಹರಿಸಿರುವ ಸಾಧ್ಯತೆ ಹೆಚ್ಚಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಕೌಶಲ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
Advertisement