
ತಿರುವನಂತಪುರಮ್: ಕೇರಳದಲ್ಲಿ ಅಗ್ನಿ ದುರಂತ ಸಂಭವಿಸಿದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವುದಕ್ಕೆ ಕೇರಳ ಪೋಲಿಸ್ ಮಹಾನಿರ್ದೇಶಕ ಟಿ.ಪಿ. ಸೇನ್'ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಪೊಲೀಸ್ ಮಹಾ ನಿರ್ದೇಶಕ ಸೇನ್ ಕುಮಾರ್ ಅವರೇ ಹೇಳಿರುವ ಮಾಹಿತಿ ಪ್ರಕಾರ ಅಗ್ನಿ ದುರಂತ ಸಂಭವಿಸಿದ ಪ್ರದೇಶದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆಗೆ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಅಥವಾ ಇನ್ನಿತರ ವಿವಿಐಪಿ ಗಳಿಗೆ ಹೆಚ್ಚಿನ ಭದ್ರತೆ ಒದಗಿಸುವುದು ಕಷ್ಟ ಸಾಧ್ಯವಾಗಿತ್ತು. ಆದ್ದರಿಂದ ಪ್ರಧಾನಿ ಮೋದಿ ಅವರ ಭೇಟಿಯನ್ನು ಮುಂದೂಡುವಂತೆ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.
ಸೇನ್ ಕುಮಾರ್ ಅವರ ಸಲಹೆಯಂತೆ ಡಿಜಿಪಿ, ಪ್ರಧಾನಿ ಮೋದಿ ಅವರ ಭೇಟಿಯನ್ನು ಒಂದು ದಿನ ಮುಂದೂಡುವಂತೆ ಎಸ್ ಪಿಜಿ ಗೆ ಮನವಿ ಮಾಡಿದ್ದರು, ಆದರೆ ಡಿಜಿಪಿಯ ಮನವಿಯನ್ನು ನಿರಾಕರಿಸಿದ ಎಸ್ ಪಿಜಿ ತಂಡ ಪ್ರಧಾನಿ ನರೇಂದ್ರ ಮೋದಿ ಅವರು ಅಂದೇ ಭೇಟಿ ನೀಡಲು ನಿರ್ಧರಿಸಿದ್ದಾರೆಂದು ಕಾರಣ ನೀಡಿತ್ತು ಎಂದು ತಿಳಿದುಬಂದಿದೆ. ಕೇವಲ ಮೋದಿ ಅವರ ಭೇಟಿಯನ್ನು ಮಾತ್ರವಲ್ಲದೇ, ರಾಹುಲ್ ಗಾಂಧಿ ಅವರ ಭೆಟಿಗೂ ಸೇನ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
ಅಗ್ನಿ ದುರಂತವನ್ನು ತಡೆಗಟ್ಟಲು ವಿಫಲರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ತಮ್ಮ ಶಿಫಾರಸ್ಸನ್ನು ಸರಿಯಾಗಿ ಕಾರ್ಯಗತಗೊಳಿಸಿಲ್ಲ ಎಂದು ಗೃಹ ಇಲಾಖೆ ಕಾರ್ಯದರ್ಶಿ ನಳಿನಿ ನೆಟ್ಟೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement