
ನವದೆಹಲಿ: ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭೂಕಂಪದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ಘಟನೆ ವೇಳೆ ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗರಾಗಲಿ. ಭೂಕಂಪದಲ್ಲಿ ಸಂಭವಿಸಿರುವ ಆಸ್ತಿ ಹಾಗೂ ಮೂಲಭೂತ ಸೌಕರ್ಯಗಳ ಹಾನಿ ಕಡಿಮೆ ಮಟ್ಟದ್ದಾಗಿರಲಿ ಎಂದು ಭಯಸುತ್ತೇನೆಂದು ಹೇಳಿದ್ದಾರೆ.
ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ರಾಜಧಾನಿ ಕ್ವಿಟೋ ಕರಾವಳಿ ತೀರದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಇಂದು ಬೆಳಿಗ್ಗೆ ಸಂಭವಿಸಿದ್ದು, ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸುನಾಮಿ ಸಂಭವಿಸುವ ಕುರಿತು ಎಚ್ಚರಿಕೆ ರವಾನಿಸಿದೆ. ಭೂಕಂಪದ ಪರಿಣಾಮ ಈಕ್ವೆಡಾರ್ ನಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ನೂರಾರು ಬೃಹತ್ ಕಟ್ಟಡಗಳು ನೆಲಕ್ಕುರುಳಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಶಂಕೆ ವ್ಯಕ್ತವಾಗುತ್ತಿದೆ.
Advertisement