
ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ವೈವಾಹಿಕ ಅತ್ಯಾಚಾರದ ಅಪರಾಧೀಕರಣವನ್ನು ಭಾರತದಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ ಒಂದು ತಿಂಗಳ ನಂತರ ಈ ಬಗ್ಗೆ ಮತ್ತೊಮ್ಮೆ ಹೇಳಿಕೆ ನೀಡಿರುವ ಮನೇಕಾ ಗಾಂಧಿ ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
61 ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಬೇಟಿ ಬಚಾವೋ- ಭೇಟಿ ಪಡಾವೋ ಅಭಿಯಾನದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿರುವ ಮನೇಕಾ ಗಾಂಧಿ ಈ ಹೇಳಿಕೆ ನೀಡಿದ್ದು ಕೇಂದ್ರ ಸರ್ಕಾರ ಶೀಘ್ರವೇ ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಇದೇ ವಿಷಯವಾಗಿ ಗೃಹ ಸಚಿವಾಲಯ ಕಾನೂನು ಆಯೋಗದ ಅಭಿಪ್ರಾಯ ಕೇಳಿತ್ತು. ಅಂತಾರಾಷ್ಟ್ರೀಯವಾಗಿ ಪರಿಭಾವಿಸಲಾಗಿರುವ ವೈವಾಹಿಕ ಅತ್ಯಾಚಾರದ ಅಪರಾಧೀಕರಣವನ್ನು ಭಾರತದಲ್ಲಿ ಅನ್ವಯಿಸಲು ಸಾಧ್ಯವಿಲ್ಲ, ಏಕೆಂದರೆ ಇಲ್ಲಿ ಬಡತನ, ಶಿಕ್ಷಣ ಮಟ್ಟ, ಅಸಂಖ್ಯ ಸಾಮಾಜಿಕ ಕಟ್ಟುಕಟ್ಟಳೆಗಳು, ಮೌಲ್ಯಗಳು, ಧಾರ್ಮಿಕ ನಂಬಿಕೆಗಳು, ಜನರ ಮನೋಭಾವ ಮುಂತಾಗಿ ಹಲವಾರು ಬಗೆಯ ತೊಡಕುಗಳಿವೆ ಎಂದು ಮನೇಕಾ ಗಾಂಧಿ ಹೇಳಿದ್ದರು.
Advertisement