ಹಂದ್ವಾರಾ ಹಿಂಸಾಚಾರ: ಬಾಲಕಿ ಹೇಳಿಕೆ ಬಳಿಕ ಓರ್ವ ಶಂಕಿತನ ಬಂಧನ

ಭಾರತೀಯ ಯೋಧನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ನಡೆದಿದ್ದ ಹಂದ್ವಾರಾ ಹಿಂಸಾಚಾರ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಶಂಕಿತ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ...
ತಹಬದಿಗೆ ಬಂದ ಹಂದ್ವಾರಾ ಹಿಂಸಾಚಾರ (ಪಿಟಿಐ ಚಿತ್ರ)
ತಹಬದಿಗೆ ಬಂದ ಹಂದ್ವಾರಾ ಹಿಂಸಾಚಾರ (ಪಿಟಿಐ ಚಿತ್ರ)

ಶ್ರೀನಗರ: ಭಾರತೀಯ ಯೋಧನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ನಡೆದಿದ್ದ ಹಂದ್ವಾರಾ ಹಿಂಸಾಚಾರ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಶಂಕಿತ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ.

ನಿನ್ನೆಯಷ್ಟೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿ ಪೋಷಕರ ವಿರೋಧದ ನಡುವೆಯೂ ನ್ಯಾಯಾಲಯದಲ್ಲಿ ಶಂಕಿತ ವ್ಯಕ್ತಿಗಳ ಇಬ್ಬರ ಹೆಸರನ್ನು ಹೆಸರಿಸಿದ್ದಳು. ಅದರಂತೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಸೋಮವಾರ ರಾತ್ರಿ ಹಿಲಾಲ್ ಅಹಮದ್ ಬಂದೆ ಎಂಬ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಬಂಧಿತ ವ್ಯಕ್ತಿಯನ್ನು ಪೊಲೀಸರು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಾಲಕಿ ಹೆಸರಿಸಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಕಿ ನಿನ್ನೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ತನಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಆರೋಪಿಗಳ ಹೆಸರನ್ನು ಹೇಳಿದ್ದಳು. ಇಬ್ಬರು ಆರೋಪಿಗಳ  ಪೈಕಿ ಬಂದೆ ಕೂಡ ಒಬ್ಬನಾಗಿದ್ದು, ಏಪ್ರಿಲ್ 12ರಂದು ಹಂದ್ವಾರ ಪಟ್ಟಣದ ಸಾರ್ವಜನಿಕ ಶೌಚಗೃಹದಿಂದ ಬಾಲಕಿ ಹೊರಬರುವಾಗ ಹಿಲಾಲ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಬಾಲಕಿ ಹೇಳಿಕೆ ನೀಡಿದ್ದಳು. ಆದರೆ ಕೆಲ ಸ್ಥಳೀಯರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ಓರ್ವ ಯೋಧ ಎಂದು ಆರೋಪಿಸಿದ್ದರು. ಆದರೆ ಬಾಲಕಿ ತನ್ನ ಹೇಳಿಕೆಯಲ್ಲಿ ಸ್ಥಳೀಯರ ಹೇಳಿಕೆಯನ್ನು ನಿರಾಕರಿಸಿದ್ದು, ಯೋಧರು ತನಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಳು.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಗೋಲಿಬಾರ್​ನಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ 5 ಮಂದಿ ನಾಗರೀಕರು ಅಸುನೀಗಿದ್ದರು ಮತ್ತು ಯೋಧರು ಸೇರಿದಂತೆ ಹತ್ತಾರು ಜನರು ಗಾಯಗೊಂಡಿದ್ದರು.

ಮಾರ್ಕೆಟ್ ಬಳಿ ನಿರ್ಮಾಣವಾಗಿದ್ದ ಸೇನಾ ಬಂಕರ್ ಗಳ ತೆರವು
ಇದೇ ವೇಳೆ ಹಂದ್ವಾರಾದಲ್ಲಿ ಉಂಟಾಗಿದ್ದ ಹಿಂಸಾಚಾರ ತಹಬದಿಗೆ ಬಂದ ಕಾರಣ ಹಂದ್ವಾರಾ ಮಾರ್ಕೆಟ್ ಬಳಿ ಸೇನೆ ನಿರ್ಮಾಣ ಮಾಡಿದ್ದ 3 ಸೇನಾ ಬಂಕರ್ ಗಳನ್ನು ತೆರವುಗೊಳಿಸಲಾಗಿದೆ.  ಬಾಲಕಿಗೆ ಯೋಧನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಸ್ಥಳೀಯರು ವ್ಯಾಪಕ ಪ್ರತಿಭಟನೆಯಲ್ಲಿ ತೊಡಗಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಕೆಟ್  ಬಳಿ ಭಾರತೀಯ ಸೇನೆ 3 ಬಂಕರ್ ಗಳನ್ನು ನಿರ್ಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com