ಛೋಟಾ ರಾಜನ್ ಮಾದರಿಯಲ್ಲಿ ಮಲ್ಯ ಬಂಧನಕ್ಕೆ ಬಲೆ ಬೀಸಿದ ಜಾರಿ ನಿರ್ದೇಶನಾಲಯ?

ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಇದೀಗ ಅದನ್ನು ತೀರಿಸಲಾಗದೇ ವಿದೇಶದಲ್ಲಿ ಅವಿತಿರುವ ಉಧ್ಯಮಿ ವಿಜಯ್ ಮಲ್ಯರನ್ನು ಬಂಧಿಸಲು ಭೂಗತ ಪಾತಕಿ ಛೋಟಾರಾಜನ್ ಬಂಧನಕ್ಕೆ ಹೆಣೆಯಲಾಗಿದ್ದ ಜಾಲವನ್ನೇ ಹೆಣೆಯಲಾಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ...
ಉಧ್ಯಮಿ ವಿಜಯ್ ಮಲ್ಯ (ಸಂಗ್ರಹ ಚಿತ್ರ)
ಉಧ್ಯಮಿ ವಿಜಯ್ ಮಲ್ಯ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಇದೀಗ ಅದನ್ನು ತೀರಿಸಲಾಗದೇ ವಿದೇಶದಲ್ಲಿ ಅವಿತಿರುವ ಉಧ್ಯಮಿ ವಿಜಯ್ ಮಲ್ಯರನ್ನು ಬಂಧಿಸಲು ಭೂಗತ  ಪಾತಕಿ ಛೋಟಾರಾಜನ್ ಬಂಧನಕ್ಕೆ ಹೆಣೆಯಲಾಗಿದ್ದ ಜಾಲವನ್ನೇ ಹೆಣೆಯಲಾಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಉಧ್ಯಮಿ ವಿಜಯ್ ಮಲ್ಯ ಬಂಧನಕ್ಕಾಗಿ ಜಾರಿ ನಿರ್ದೇಶನಾಲಯ ಇಂಟರ್ ಪೋಲ್ ನೆರವು ಕೋರಿದ್ದು, ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ನಿಟ್ಟಿನಲ್ಲಿ ತಮಗೆ  ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಅಲ್ಲದೆ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಬಂಧಿಸಿದ ಮಾದರಿಯಲ್ಲೇ ಮಲ್ಯರನ್ನು ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಹಾಗೂ  ತನಿಖಾ ಸಂಸ್ಥೆಗಳು ಮಾಸ್ಟರ್‌ಪ್ಲಾನ್ ರೂಪಿಸಿವೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಕಳೆದ ವರ್ಷ ಇಂಡೋನೇಷ್ಯಾದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪಾತಕಿ  ಛೋಟಾರಾಜನ್‌ನ್ನು ಬಂಧಿಸಿ, ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಈಗ ಇಂಟರ್‌ಪೋಲ್ ಸಹಾಯದೊಂದಿಗೆ ಇದೇ  ತಂತ್ರವನ್ನು ಮಲ್ಯ ಮೇಲೆ ಪ್ರಯೋಗಿಸಲು ಜಾರಿ  ನಿರ್ದೇಶನಾಲಯದಿಂದ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಅದರಂತೆ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕು ಎಂದು ಜಾರಿ ನಿರ್ದೇಶನಾಲಯ ಇಂಟರ್ ಪೋಲ್ ಗೆ ಮನವಿ ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ವಿಜಯ್ ಮಲ್ಯ ವಿರುದ್ಧ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದರೆ, ಹಲವು ದೇಶದ ತನಿಖಾ ಸಂಸ್ಥೆಗಳು ಅವರ ಮೇಲೆ ನಿಗಾ ಇಟ್ಟಿರುತ್ತವೆ. ಬೇರೆ ಪ್ರದೇಶ ಅಥವಾ ರಾಷ್ಟ್ರಕ್ಕೆ  ಯಾವುದೇ ಮಾರ್ಗದಲ್ಲಿ ಸಂಚರಿಸಿದರೂ ಪೊಲೀಸರ ಕೈಗೆ ಸಿಗುವ ಸಾಧ್ಯತೆ ಇದೆ. ಅಂತೆಯೇ ನಕಲಿ ಪಾಸ್‌ಪೋರ್ಟ್ ಅಥವಾ ನಕಲಿ ದಾಖಲೆ ಸಹಾಯದಿಂದ ಪ್ರಯಾಣಿಸಿದರೂ ಮಲ್ಯ  ಪೊಲೀಸರಿಗೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಿರುತ್ತದೆ.

ಇಂಟರ್ ಪೋಲ್ ಪರಿಶೀಲನೆ ವಿಳಂಬ
ಇನ್ನು ಜಾರಿ ನಿರ್ದೇಶನಾಲಯದ ಮನವಿಯನ್ನು ಇಂಟರ್ ಪೋಲ್ ಅಧಿಕಾರಿಗಳು ಪರಿಶೀಲನೆಗೆ ತೆಗೆದುಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕು ಎಂದು ಹೇಳಲಾಗುತ್ತಿದೆ. ಅಪರಾಧದ  ಗಂಭೀರತೆ ಪರಿಗಣಿಸಿ, ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸುವುದರಿಂದ, ಮಲ್ಯ ಪ್ರಕರಣ ಆರ್ಥಿಕ ವಂಚನೆಯಾಗಿದ್ದು, ಪರಿಶೀಲನೆ ವಿಳಂಬವಾಗುವ ಸಾಧ್ಯತೆಯಿದೆ. ಗಂಭೀರ  ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ರೆಡ್‌ಕಾರ್ನರ್ ನೋಟಿಸ್ ಹೊರಡಿಸುವುದು ಸ್ವಲ್ಪ ಸುಲಭ. ಹೀಗಾಗಿ ಇಂಟರ್ ಪೋಲ್ ಅಧಿಕಾರಿಗಳು ಮಲ್ಯ ವಿರುದ್ಧ ಮನವಿಯನ್ನು ಪರಿಶೀಲಸಲು  ಕಾಲಾವಕಾಶ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಸಾವಿರಾರು ಕೋಟಿ ಸಾಲ ಪಡೆದಿರುವ ಮಲ್ಯ ಅದನ್ನು ತೀರಿಸಲಾಗದೇ ಬ್ರಿಟನ್ ಗೆ ಪರಾರಿಯಾಗಿದ್ದಾರೆ. ಅವರ ವಿರುದ್ಧ ಭಾರತದಲ್ಲಿ ಹವಾಲಾ ಹಣ ನಿಗ್ರಹ  ಕಾಯ್ದೆಯಡಿಯಲ್ಲಿ ಪ್ರಕರಣ ದಾಖಸಿಕೊಂಡಿರುವ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com