
ತೆಲಂಗಾಣ: ತೆಲಂಗಾಣದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಬಿಸಿಲಿನ ತಾಪಕ್ಕೆ ಕೆರೆ, ಕಟ್ಟೆ ಬಾವಿಗಳಲ್ಲಿದ್ದ ನೀರು ಒಣಗಿ ಹೋಗಿದೆ. ಜನ ಜಾನುವಾರುಗಳು ಆಹಾರ-ನೀರಿಗಾಗಿ ಪರದಾಡುತ್ತಿದ್ದಾರೆ.
ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯ ಮದನಾಪುರಂ ಗ್ರಾಮದಲ್ಲಿ ಭೀಕರ ಬರಗಾಲ ಆವರಿಸಿದೆ. ಇಲ್ಲಿನ ಜನರು ಅತಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಊರಿನಲ್ಲಿ ಇರುವ ಒಂದು ಬೋರ್ ವೆಲ್ ನಲ್ಲಿ ಮಾತ್ರ ಚೂರು ಚೂರು ನೀರು ಬರುತ್ತಿದೆ. ಈ ಗ್ರಾಮದ ಜಾನುವಾರುಗಳಲ್ಲಿ ಬರೀ ಮೂಳೆ ಹಾಗೂ ಚರ್ಮ ಮಾತ್ರ ಉಳಿದಿದೆ, ಇದೇ ಗ್ರಾಮದಲ್ಲಿ ಗುಡ್ಡೇಮೇಡಿ ಬೂಚಣ್ಣ ಎಂಬ ರೈತನಿದ್ದಾನೆ. ಈತನ ಮನೆಯಲ್ಲಿ ಮನುಷ್ಯರಿಗೆ ಹಾಗೂ ದನಕರುಗಳಿಗೆ ತಿನ್ನು ಏನೂ ಇಲ್ಲ. ಅಂಥ ದಯನೀಯ ಸ್ಥಿತಿ ತಲುಪಿದ್ದಾರೆ.
ಆತನ ಹೆಂಡತಿ ನೆರೆಹೊರೆಯವರ ಬೇಡಿ ಅನ್ನ ತರುತ್ತಾಳೆ. ಮಕ್ಕಳು ಬೆಳಗ್ಗೆಯಿಂದ ರಾತ್ರಿವರೆಗೆ ನೀರಿಗಾಗಿ ಎಲ್ಲೆಡೆ ಅಲೆಯುತ್ತಿದ್ದಾರೆ. ನಮ್ಮ ಬಳಿ ನೀರು ಆಹಾರ ಎರಡು ಇಲ್ಲ. ನಾವು ಪ್ರತಿನಿತ್ಯ ಉಪ್ಪು ನೀರು ಕುಡಿದು ಬದುಕುತ್ತಿದ್ದೇವೆ, ಆ ಮುಗ್ಧ ಹಸುಗಳಿಗಾಗಿ ಪ್ರತಿದಿನ ಒಣ ಹುಲ್ಲನ್ನು ಹುಡುಕುತ್ತಿದ್ದೇನೆ, ಆದರೆ ಅವುಗಳಿಗೆ ಎಲ್ಲಿಯೂ ಒಂದು ಕಡ್ಡಿ ಹುಲ್ಲು ಸಿಗುತ್ತಿಲ್ಲ. ಈ ಬಾರಿಯ ಬರದಿಂದ ಅವು ಬದುಕುಳಿಯುವುದು ಕಷ್ಟ ಎಂದು ಕಣ್ಣೀರು ಹಾಕುತ್ತಾ ನೊಂದು ನುಡಿದಿದ್ದಾರೆ.
ಹಸುಗಳಿಗೆ ತಿನ್ನಿಸುವ ಹುಲ್ಲು ಅತ್ಯಮೂಲ್ಯವಾಗಿದೆ. ಎರಡು ವರ್ಷದ ಹಿಂದೆ ಒಂದು ಟ್ರ್ಯಾಕ್ಟರ್ ಹುಲ್ಲು 500 ರು ಗೆ ಮಾರಾಟವಾಗುತ್ತಿತ್ತು. ಈಗ ಒಂದು ಟ್ರ್ಯಾಕ್ಟರ್ ಹುಲ್ಲು 15 ಸಾವಿರ ರು.ಆಗಿದೆ. ಅಕ್ಕಿ, ಬೇಳೆ, ಹಸುವಿನ ಮೇವು ಖರೀದಿಸಲು ನಮ್ಮಿಂದ ಸಾಧ್ಯವಿಲ್ಲ, ಹಾಗಂತ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಯಾಕೆಂದರೇ ಯಾವ ಸಮಯದಲ್ಲಾದರೂ ನಾವು ಸಾಯುವ ಸ್ಥಿತಿ ತಲುಪಿದ್ದೇವೆ ಎಂದು ತಮ್ಮ ಕಷ್ಟದ ಜೀವನದ ಬಗ್ಗೆ ಎಲ್ಲಾ ಮಾಹಿತಿಗಳನ್ನು ಬಿಚ್ಟಿಟ್ಟಿದ್ದಾರೆ.
ತೀರಾ ಹಿಂದುಳಿದಿರುವ ಈ ಹಳ್ಳಿಗೆ ಇನ್ನು ಸರ್ಕಾರದಿಂದ ಬಿಡುಗಡೆಯಾಗಿರುವ ಹಣ ಸಿಕ್ಕಿಲ್ಲ. ಕೇವಲ ಒಂದೇ ಒಂದು ಟ್ಯಾಂಕರ್ ಇಡೀ ಗ್ರಾಮಕ್ಕೆ ನೀರು ಪೂರೈಸುತ್ತದೆ. ಇಲ್ಲಿಯೂ ಕೂಡ ಜಾತೀಯತೆ ತಾಂಡವವಾಡುತ್ತಿದ್ದು, ಮೊದಲಿಗೆ ಮೇಲ್ಜಾತಿ ಮನೆಯವರಿಗೆ ನೀರು ಪೂರೈಸಲಾಗುತ್ತದೆ. ಇನ್ನು ಕೆಳ ಜಾತಿ ಇರುವ ಏರಿಯಾಗೆ ನೀರು ಪೂರೈಸುವಷ್ಟರಲ್ಲಿ ನೀರು ಖಾಲಿಯಾಗಿರುತ್ತದೆ. ಒಟ್ಟಾರೆ ಈ ಬಾರಿಯ ಬರ ತೆಲಂಗಾಣದ ಜನರನ್ನು ಕಂಗೆಡಿಸುತ್ತಿದೆ
Advertisement