
ನವದೆಹಲಿ: ಸದೃಢ ನ್ಯಾಯಾಂಗದ ವ್ಯವಸ್ಥೆ ಇಲ್ಲದೇ ಭಾರತ ಆರ್ಥಿಕವಾಗಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.
ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಬೇಕಾದರೆ, ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಯಶಸ್ವಿಗೊಳಿಸಬೇಕಾದರೆ ಸದೃಢ ನ್ಯಾಯಾಂಗ ವ್ಯವಸ್ಥೆ ಅಗತ್ಯವಿದೆ. ನಾವು ಯಾರನ್ನು ಹೂಡಿಕೆ ಮಾಡಲು ಆಹ್ವಾನಿಸುತ್ತಿದ್ದೇವೋ ಅವರಿಗೆ ದೇಶದ ನ್ಯಾಯಾಂಗ ವ್ಯವಸ್ಥೆ, ನ್ಯಾಯ ವಿತರಣೆ ಬಗ್ಗೆ ಕಾಳಜಿ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಠಾಕೂರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಟಿಎಸ್ ಠಾಕೂರ್ ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾದ ನ್ಯಾಯಾಂಗ ವ್ಯವಸ್ಥೆ ಸಹ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ. ನ್ಯಾಯ ವಿತರಣೆ ಪ್ರಕ್ರಿಯೆ ನ್ಯಾಯಾಧೀಶರ ಸಂಖ್ಯೆಯ ಅನುಪಾತದಿಂದ ಹಾಗೂ ದೀರ್ಘಾವಧಿಯಿಂದ ಖಾಲಿ ಇರುವ ಹುದ್ದೆಗಳಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿದೆ, ಅಭಿವೃದ್ಧಿ ಹೊಂದಿರುವ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿನ ನ್ಯಾಯ ವಿತರಣೆ ಪ್ರಕ್ರಿಯೆ ನಿರಾಶಾದಾಯಕವಾಗಿದೆ ಎಂದಿರುವ ಅವರು ಎಲ್ಲದಕ್ಕೂ ನ್ಯಾಯಾಂಗ ವ್ಯವಸ್ಥೆಯನ್ನೇ ದೂಷಿಸುವ ಪ್ರವೃತ್ತಿ ಬಗ್ಗೆ ಬೇಸರ ವ್ಯಕ್ತಪಡಿಸಿ ಪ್ರಧಾನಿ ಮೋದಿ ಎದುರಲ್ಲೇ ಕಣ್ಣೀರಿಟ್ಟ ಪ್ರಸಂಗವು ನಡೆಯಿತು.
Advertisement