ಉಗ್ರನ ಸಾವಿಗೆ ಕಾರಣವಾದ ಭಾರತೀಯ ಸೇನೆಯ ಶ್ವಾನಕ್ಕೆ ಶೌರ್ಯ ಪ್ರಶಸ್ತಿ?

ಪಠಾಣ್‌ಕೋಟ್ ಉಗ್ರ ದಾಳಿ ವೇಳೆ ಅಡಗಿದ್ದ ಉಗ್ರನ ಮೇಲೆ ಎರಗಿ ಆತನ ಸಾವಿಗೆ ಕಾರಣವಾಗಿದ್ದ ಭಾರತೀಯ ಸೇನೆಯ "ರಾಕೆಟ್" ಎಂಬ ಶ್ವಾನಕ್ಕೆ "ಶೌರ್ಯ ಪ್ರಶಸ್ತಿ" ಘೋಷಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ...
ಭಾರತೀಯ ಸೇನೆಯ ಶ್ವಾನದಳ (ಸಾಂದರ್ಭಿಕ ಚಿತ್ರ)
ಭಾರತೀಯ ಸೇನೆಯ ಶ್ವಾನದಳ (ಸಾಂದರ್ಭಿಕ ಚಿತ್ರ)

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಂಜಾಬ್ ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಡಗಿದ್ದ ಉಗ್ರನನ್ನು ಪತ್ತೆ ಮಾಡುವುದಷ್ಟೇ ಅಲ್ಲದೇ  ಆತನ ಮೇಲೆ ಎರಗಿ ಸಾವಿಗೆ ಕಾರಣವಾಗಿದ್ದ ಭಾರತೀಯ ಸೇನೆಯ ಶ್ವಾನದಳದ "ರಾಕೆಟ್" ಎಂಬ ಶ್ವಾನಕ್ಕೆ "ಶೌರ್ಯ ಪ್ರಶಸ್ತಿ" ಘೋಷಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಪಠಾಣ್ ಕೋಟ್ ಉಗ್ರ ದಾಳಿ ಸಂದರ್ಭದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದ ಎನ್ ಎಸ್ ಜಿ ಪಡೆಯಿಂದಲೇ ರಾಕೆಟ್ ಗೆ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ  ಶಿಫಾರಸ್ಸು ಮಾಡಲಾಗಿದೆ. ಪಠಾಣ್ ಕೋಟ್ ಉಗ್ರ ದಾಳಿ ಸಂದರ್ಭದಲ್ಲಿ  ಎನ್‌ಎಸ್‌ಜಿ ಯೋಧರಿಗೆ ಸಾತ್ ನೀಡಿ, ದಿಟ್ಟತನದಿಂದ ಸೆಣಸಿ ಒಬ್ಬ ಉಗ್ರನ ಹತ್ಯೆಗೈಯುವಲ್ಲಿ ಪ್ರಮುಖ ಪಾತ್ರ  ವಹಿಸಿದ ಬೆಲ್ಜಿಯಂ ಮಾಲಿನೋಸ್ ತಳಿಯ ಶ್ವಾನ ‘ರಾಕೆಟ್’ ನ ಸಾಹಸ ಗುರುತಿರಿಸಿರುವ ಎನ್ ಎಸ್ ಜಿ ಶೌರ್ಯ ಪ್ರಶಸ್ತಿಗೆ ಶನಿವಾರ ಶಿಫಾರಸ್ಸು ಮಾಡಿದೆ.

ಮೂಲಗಳ ಪ್ರಕಾರ ರಾಕೆಟ್ ಗೆ ಶೌರ್ಯ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು  ಹೇಳಲಾಗುತ್ತಿದೆ. "ಉಗ್ರ ನಿಗ್ರಹ ಕಾರ್ಯಾಚರಣೆ ಸಂದರ್ಭ ರಾಕೆಟ್ ಅದ್ಭುತ ಸಾಹಸ ಮೆರೆದಿದೆ. ಹೀಗಾಗಿ ಅದಕ್ಕೆ ಶೌರ್ಯ ಪದಕ ನೀಡುವಂತೆ ಶಿಫಾರಸು ಮಾಡಲಾಗಿದೆ ಎಂದು ಹಿರಿಯ  ಎನ್‌ಎಸ್‌ಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಕಾರ್ಯಾಚರಣೆ ಸಂದರ್ಭದಲ್ಲಿ ಓರ್ವ ಉಗ್ರ ಯೋಧರ ಕಣ್ಣುತಪ್ಪಿಸಿ ವಾಯುನೆಲೆಯೊಳಗೆ ಅಡಗಿದ್ದ. ಉಗ್ರನ ಬಳಿ ಶಸ್ತ್ರಾಸ್ತ್ರಗಳೂ ಇದ್ದವು. ಇಂಥ ಸಂದರ್ಭದಲ್ಲಿ ಎನ್‌ಎಸ್‌ಜಿ ಯೋಧರಿಗೆ  ನೆರವಾದ ಶ್ವಾನ ರಾಕೆಟ್, ಉಗ್ರನನ್ನು ಪತ್ತೆ ಮಾಡುವ ಜತೆಗೆ ಆತನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಹೀಗಾಗಿ ಉಗ್ರನನ್ನು ಹತ್ಯೆಗೈಯಲು ಯೋಧರಿಗೆ ಸಹಾಯವಾಯಿತು. ಈ  ರಾಕೆಟ್ ಗೆ ಹಲವು ಗುಂಡೇಟು ಬಿದ್ದರೂ ದೃತಿಗೆಡದ ರಾಕೆಟ್ ಉಗ್ರನನ್ನು ನೆಲಕ್ಕುರುಳಿಸುವಲ್ಲಿ ಯಶಸ್ವಿಯಾಗಿತ್ತು. ಉಗ್ರ ನೆಲಕ್ಕುರುಳುತ್ತಿದ್ದಂತೆಯೇ ಉಗ್ರರನ್ನು ಎನ್ ಎಸ್ ಜಿ ಯೋಧರು  ಗುಂಡಿಟ್ಟು ಕೊಂದು ಹಾಕಿದ್ದರು. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ರಾಕೆಟ್ ನಾಯಿಯನ್ನು ಸೇನಾಸ್ಪತ್ರೆಗೆ ದಾಖಲಿಸಿ ತಿಂಗಳುಗಳ ಕಾಲ ಚಿಕಿತ್ಸೆ ನೀಡಲಾಗಿ, ಇದೀಗ ರಾಕೆಟ್ ಕರ್ತವ್ಯಕ್ಕೆ  ಮರಳಿದೆ. ರಾಕೆಟ್ ನಾಯಿಯ ಸಾಹಸವನ್ನು ಯೋಧರು ಮುಕ್ತಕಂಠದಿಂದ ಶ್ಲಾಸಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಒಟ್ಟಾರೆ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ತನ್ನ ಪ್ರಾಣದ ಹಂಗನ್ನು ತೊರೆದು ಯೋಧರಿಗೆ ನೆರವಾಗಿದ್ದ ಶ್ವಾನ ರಾಕೆಟ್ ಗೆ ಅರ್ಹವಾಗಿಯೇ ಶೌರ್ಯ ಪ್ರಶಸ್ತಿ ಒಲಿದು ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com