

ನಾಸಿಕ್: ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ನನ್ನು ದೇಶದ್ರೋಹಿ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಅಭಿಪ್ರಾಯಪಟ್ಟಿದೆ.
ಶಿವಸೇನೆ ಪಕ್ಷದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿರುವ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ, ಕನ್ಹಯ್ಯ ಕುಮಾರ್ ಗೆ ಮೊದಲು ಆದ್ಯತೆ ನೀಡಿದವರು ಯಾರು ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಕನ್ಹಯ್ಯ ಕುಮಾರ್ ನನ್ನು ದೇಶದ್ರೋಹಿಯೆಂದು ತಪ್ಪಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.
ಯುವಕರನ್ನು ಈ ರೀತಿಯಾಗಿ ದೇಶದ್ರೋಹಿ ಎಂದು ಬಿಂಬಿಸಿದರೆ ಅವರು ದೇಶಕ್ಕಾಗಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ದೇಶದ್ರೋಹಿಗಳೆಂದು ಬಿಂಬಿಸುವುದರಿಂದ ಬಿಜೆಪಿ ಯುವಕರ ಬೆಂಬಲ ಕಳೆದುಕೊಳ್ಳಲಿದೆ, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಕರ ವಿಷಯದಲ್ಲಿ ಬಿಜೆಪಿ ಎಚ್ಚರದಿಂದ ವರ್ತಿಸಬೇಕು ಎಂದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.