
ಮುಕ್ತಸರ: ಮುಕ್ತಸರ ಜಿಲ್ಲೆಯಲ್ಲಿ ಯುವತಿಯೊಬ್ಬಳನ್ನು ಕಚೇರಿಯಿಂದ ಎಳೆದೊಯ್ದು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
24 ವರ್ಷದ ಯುವತಿಯನ್ನು ಹಾಡ ಹಗಲ್ಲೇ ಕಚೇರಿಯಿಂದ ಎಳೆದೊಯ್ಯುತ್ತಿರುವ ದೃಶ್ಯ ಸಮೀಪದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಪ್ರಕರಣ ಸಂಬಂಧ ಪೊಲೀಸರು ಎರಡನೇ ಆರೋಪಿಯನ್ನು ಬಂಧಿಸಿದ್ದು, ಸಂದೀಪ್ ಸಿಪಾ ಎಂದು ಗುರ್ತಿಸಲಾಗಿದೆ. ಸಂದೀಪ್ ಸಿಪಾ ಈಗಾಗಲೇ ಬಂಧಿತನಾಗಿರುವ ಮೊದಲ ಆರೋಪಿ ಗುರಿಂದರ್ ಗೆ ಚಾಲಕನಾಗಿ ಸಹಾಯ ಮಾಡಿದ್ದ ಎಂದು ಹೇಳಲಾಗುತ್ತಿದೆ. ಘಟನೆಗೆ ಬಳಸಲಾಗಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿ ದಲಿತಳಾಗಿದ್ದು ಮುಕ್ತಸರದ ಮಾಲೌಟಿನ ಕಂಪ್ಯೂಟರ್ ಕೇಂದ್ರ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಚೇರಿಯಿಂದ ಆಕೆಯನ್ನು ಬಲವಂತವಾಗಿ ಎಳೆದೊಯ್ಯುತ್ತಿದ್ದ ದೃಶ್ಯ ಮಾರ್ಚ್ 25ರಂದು ಕ್ಯಾಮರಾದಲ್ಲಿ ದಾಖಲಾಗಿತ್ತು.
ಯುವತಿ ಅತನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಯುವತಿಯನ್ನು ದುಷ್ಕರ್ಮಿಯೊಬ್ಬ ಎಳೆದೊಯ್ಯುತ್ತಿದ್ದರೂ ಅಲ್ಲಿನ ಸ್ಥಳೀಯರಾರು ಆಕೆಯ ರಕ್ಷಣೆಗೆ ದಾವಿಸಿಲ್ಲ. ಅಪಹರಿಸಿದ ಬಳಿಕ ಆರೋಪಿಯು ಆಕೆಯನ್ನು ಜಿಲ್ಲೆಯ ತಪ ಖೇರ ಗ್ರಾಮಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಪಾದಿಸಲಾಗಿತ್ತು.
Advertisement