ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾಲಿಗೆ ಗ್ಯಾಂಗ್ರಿನ್!

ಭಾರತದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಘೋರ ಗ್ಯಾಂಗ್ರಿನ್ ಖಾಯಿಲೆಯಿಂದ ಬಳಲುತ್ತಿದ್ದಾನೆಯೇ? ಆತನ ಸಾವಿನ ಕ್ಷಣ ಸಮೀಪಿಸುತ್ತಿದೆಯೇ? ಇಂತಹ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿರುವುದು ಒಂದು ವರದಿ...
ಭೂಗತ ಪಾತಕಿ ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)
ಭೂಗತ ಪಾತಕಿ ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಘೋರ ಗ್ಯಾಂಗ್ರಿನ್ ಖಾಯಿಲೆಯಿಂದ ಬಳಲುತ್ತಿದ್ದಾನೆಯೇ? ಆತನ ಸಾವಿನ ಕ್ಷಣ  ಸಮೀಪಿಸುತ್ತಿದೆಯೇ? ಇಂತಹ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿರುವುದು ಒಂದು ವರದಿ.

ಖಾಸಗಿ ಗುಪ್ತಚರ ಸಂಸ್ಥೆಯೊಂದರ ವರದಿ ಪ್ರಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಭೀಕರ ಗ್ಯಾಂಗ್ರಿನ್ ತಗುಲಿದ್ದು, ಆತನ ಕಾಲು ಕೊಳೆಯುತ್ತಿದೆ. ಹೀಗಾಗಿ ನಡೆದಾಡಲೂ ಕೂಡ  ಆಗದೇ ವೀಲ್ ಚೇರ್ ನಲ್ಲಿ ಜೀವನ ಸಾಗಿಸುತ್ತಿದ್ದಾನೆ ಎಂದು ಹೇಳಲಾಗಿದೆ.

ವರದಿಯಲ್ಲಿ ತಿಳಿಸಿರುವಂತೆ ಪಾಕಿಸ್ತಾನದಲ್ಲಿ ದಾವೂದ್ ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ಮೂಲಗಳ ಪ್ರಕಾರ ದಾವೂದ್ ಕಾಲುಗಳನ್ನು ಕತ್ತರಿಸಿ ಹಾಕುವುದನ್ನು ಬಿಟ್ಟರೆ ಬೇರೆ  ಮಾರ್ಗವಿಲ್ಲವಂತೆ. ಅಧಿಕ ರಕ್ತ ದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದ್ದರ ಜತೆಗೆ ಸಾಕಷ್ಟು ರಕ್ತ ಲಭ್ಯವಿಲ್ಲದ್ದರಿಂದಾಗಿ ದಾವೂದ್‌ನ ಗ್ಯಾಂಗ್ರಿನ್ ಸಮಸ್ಯೆ ತೀವ್ರಗೊಂಡಿದೆ ಎಂದು  ಹೇಳಲಾಗಿದೆ. ಈಗಾಗಲೇ ಕಾಲಿನ ಬಹುತೇಕ ಭಾಗಗಳ ಕೋಶಗಳು ಸತ್ತುಹೋಗಿದ್ದು, ದಾವೂದ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯಿಂದ ಜೀವಕ್ಕೇ ಅಪಾಯವಿದೆ ಎಂದು ವೈದ್ಯರು  ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಮನೆಯಲ್ಲೇ ಚಿಕಿತ್ಸೆ
ಕರಾಚಿಯ ಲಿಯಾಖತ್ ನ್ಯಾಷನಲ್ ಹಾಸ್ಪಿಟಲ್ ಮತ್ತು ಕಂಬೈನ್ಡ್ ಮಿಲಿಟರಿ ಹಾಸ್ಪಿಟಲ್ ವೈದ್ಯರು ದಾವೂದ್‌ಗೆ ಕರಾಚಿಯ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಐಎಸ್‌ಐ ಭದ್ರತೆಯಲ್ಲಿರುವ  ಈತನ ಚಿಕಿತ್ಸೆ ನೇತೃತ್ವವನ್ನು ಸೇನೆಯ ಉನ್ನತ ಮಟ್ಟದ ತಜ್ಞ ವೈದ್ಯರು  ವಹಿಸಿದ್ದಾರೆನ್ನಲಾಗಿದೆ.

ವರದಿ ಅಲ್ಲಗಳೆದ ಬಲಗೈ ಬಂಟ ಶಕೀಲ್
ಇದೇ ವೇಳೆ ಅತ್ತ ಪಾಕಿಸ್ತಾನ ಮತ್ತು ಭಾರತೀಯ ಮಾಧ್ಯಮಗಳಲ್ಲಿ ದಾವೂದ್ ಕುರಿತ ವರದಿಗಳ ಪ್ರಸಾರವಾಗುತ್ತಿದ್ದಂತೆಯೇ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಆತನ ಬಲಗೈ  ಬಂಟ ಛೋಟಾ ಶಕೀಲ್, ದಾವೂದ್ ಗೆ ಯಾವುದೇ ರೀತಿಯ ಖಾಯಿಲೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ ಮತ್ತು ಫಿಟ್ ಆಗಿದ್ದಾರೆ ಎಂದು ಹೇಳಿದ್ದಾನೆ.

ಒಟ್ಟಾರೆ ಭಾರತದ ವಿಚಾರಣೆಗೆ ಹೆದರಿ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಪಾತಕಿ ದಾವೂದ್ ಕುರಿತು ಸುದ್ದಿಗಳು ಇದೀಗ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿದ್ದು,  ಅಂತಾರಾಷ್ಟ್ರೀಯ  ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲ ವಿಚಾರಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com