ಇಸ್ಲಾಂ, ಕುರಾನ್ ಅನುಸರಿಸುವಂತೆ ಸಂವಿಧಾನ ಹೇಳಿತ್ತೇ?: ಓವೈಸಿಗೆ ರಾಮ್ ದೇವ್

ಸಂವಿಧಾನವಿಲ್ಲದಿದ್ದರೆ ಭಾರತ್ ಮಾತಾ ಕಿ ಜೈ ಎನ್ನದವರ ತಲೆ ಕಡಿಯುತ್ತಿದ್ದೆ ಎಂದು ಹೇಳಿದ್ದ ಬಾಬಾ ರಾಮ್ ದೇವ್ ಅವರು ಇದೀಗ ಮತ್ತೆ ಓವೈಸಿ ವಿರುದ್ಧ ಕಿಡಿಕಾರಿದ್ದು, ಇಸ್ಲಾಂ ಅನುಸರಿಸುವಂತೆ, ಕುರನಾ ಓದುವಂತೆ...
ಯೋಗ ಗುರು ರಾಮ್ ದೇವ್
ಯೋಗ ಗುರು ರಾಮ್ ದೇವ್

ನವದೆಹಲಿ: ಸಂವಿಧಾನವಿಲ್ಲದಿದ್ದರೆ ಭಾರತ್ ಮಾತಾ ಕಿ ಜೈ ಎನ್ನದವರ ತಲೆ ಕಡಿಯುತ್ತಿದ್ದೆ ಎಂದು ಹೇಳಿದ್ದ ಬಾಬಾ ರಾಮ್ ದೇವ್ ಅವರು ಇದೀಗ ಮತ್ತೆ ಓವೈಸಿ ವಿರುದ್ಧ ಕಿಡಿಕಾರಿದ್ದು, ಇಸ್ಲಾಂ ಅನುಸರಿಸುವಂತೆ, ಕುರನಾ ಓದುವಂತೆ ನಮ್ಮ ಸಂವಿಧಾನ ಹೇಳಿದೆಯೇ ಎಂದು ಬುಧವಾರ ಪ್ರಶ್ನಿಸಿದ್ದಾರೆ.

ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಈ ಹಿಂದೆ ಹೇಳಿಕೆ ನೀಡಿದ್ದರ ಕುರಿತಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಭಾರತ್ ಮಾತಾ ಕಿ ಜೈ ಎಂದು ಕೂಗಲೇಬೇಕೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಹಾಗಾಗಿ ಭಾರತ್ ಮಾತಾ ಕಿ ಜೈ ಎಂದು ಕೂಗುವುದಿಲ್ಲ ಎಂದು ಈ ಹಿಂದೆ ಓವೈಸಿ ಹೇಳಿದ್ದರು.

ಓವೈಸಿಯವರು ಇಸ್ಲಾಂ ಹಾಗೂ ಕುರಾನ್ ನ್ನು ಅನುಸರಿಸುತ್ತಿದ್ದು, ಇದನ್ನು ಅನುಸರಿಸುವಂತೆ ನಮ್ಮ ಸಂವಿಧಾನ ಹೇಳಿದೆಯೇ? ಹೇಳಿಲ್ಲ ಎಂದಾದ ಮೇಲೆ ಕುರಾನ್ ನ್ನು ಯಾವ ಕಾರಣಕ್ಕೆ ಓದುತ್ತಿದ್ದಾರೆ, ಇಸ್ಲಾಂ ಧರ್ಮವನ್ನೇಕೆ ಅನುಸರಿಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪ್ರಚೋದನಾಕಾರಿ ಹಾಗೂ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗವಂತಾಗಬೇಕು. ಯುವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹೈದರಾಬಾದ್ ನ ಸಂಸದ ಓವೈಸಿ, ನನ್ನ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ. ಘೋಷಣೆಯನ್ನು ಕೂಗಿ, ದೇಶಭಕ್ತಿ ಸಾಬೀತುಪಡಿಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ಕಾನೂನು ಉಲ್ಲಂಘನೆಯ ಪ್ರಶ್ನೆ ಇಲ್ಲಿ ಹುಟ್ಟುವುದಿಲ್ಲ. ಈ ನಿಲುವಿಗೆ ನಾನು ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.

ಇದರಂತೆ ಭಾರತ್ ಮಾತಾ ಕಿ ಜೈ ಘೋಷಣೆ ವಿವಾದ ಹುಟ್ಟುಕೊಂಡಿತ್ತು. ನಂತರ ರಾಜಕೀಯ ಗಣ್ಯರು ಹಾಗೂ ಇತರೆ ಕ್ಷೇತ್ರದ ಗಣ್ಯರು ಕೂಡ ವಿವಾದ ಕುರಿತಂತೆ ಒಬ್ಬರ ಮೇಲೊಬ್ಬರಂತೆ ಕೆಸರೆರಾಚಕ್ಕೆ ಮುಂದಾಗಿದ್ದರು. ವಿವಾದ ಕುರಿತಂತೆ ಈ ಹಿಂದೆ ಮಾತನಾಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರು,  ನಾವು ನಮ್ಮ ದೇಶದ ಕಾನೂನು ಹಾಗೂ ಸಂವಿಧಾನವನ್ನು ಗೌರವಿಸುತ್ತೇವೆ. ಇಲ್ಲದೆ ಹೋಗಿದ್ದರೆ, ಭಾರತ ಮಾತೆಗೆ ಅಗೌರವ ಸೂಚಿಸುವ ಒಬ್ಬರ ತಲೆಯಲ್ಲ ಸಾವಿರ ಹಾಗೂ ಲಕ್ಷ ತಲೆಗಳನ್ನು ಉರುಳಿಸುತ್ತಿದ್ದೆವು. ಸಾರ್ವಜನಿಕ ಸಭೆಯಲ್ಲಿ ರೀತಿಯ ಹಿಂಸಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com