
ನವದೆಹಲಿ: ಬಹುಕೋಟಿ ವಿವಿಐಪಿ ಚಾಪರ್ ಹಗರಣದ ತೀರ್ಪಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪವಾಗಿರುವುದನ್ನು ಸಂಸತ್ ನಲ್ಲಿ ಪ್ರಮುಖ ಅಸ್ತ್ರವಾಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮೈಕೊಡವಿ ಸಜ್ಜಾಗಿರುವ ಕಾಂಗ್ರೆಸ್ ಉತ್ತರಾಖಂಡ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಎಂದು ಆರೋಪಿಸುವ ಮೂಲಕ ಸಂಸತ್ ನಲ್ಲಿ ಬಿಜೆಪಿ ಮೇಲೆ ಸವಾರಿ ಮಾಡುತ್ತಿರುವಂತೆಯೇ ಅತ್ತ ಇಟಲಿಯಲ್ಲಿ ಬಹುಕೋಟಿ ಮೌಲ್ಯದ ಚಾಪರ್ ಹಗರಣದ ತೀರ್ಪು ಹೊರಬಿದ್ದಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತರಾಖಂಡ ವಿಷಯ ಪ್ರಸ್ತಾಪಿಸಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಆಡಳಿತಾರೂಢ ಎನ್‌ಡಿಎಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದ್ದು, ಚಾಪರ್ ಹಗರಣದ ಮೂಲಕ ಬಿಜೆಪಿ ಕಾಂಗ್ರೆಸ್ ಬಲವಾದ ತಿರುಗೇಟು ನೀಡಲು ಸಜ್ಜಾಗಿದೆ. ಇದಕ್ಕಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಹಲವು ನಾಯಕರು ಮಂಗಳವಾರ ಸಭೆ ನಡೆಸಿ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಮತ್ತೋರ್ವ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರ ಅಕ್ರಮ ವ್ಯವಹಾರಗಳು ಕೂಡ ಕಾಂಗ್ರೆಸ್ ಸಂಸತ್ ನಲ್ಲಿ ಮುಳುವಾಗಲಿದ್ದು, ಈ ಎರಡು ಪ್ರಕರಣಗಳನ್ನಿಟ್ಟುಕೊಂಡು ಕಾಂಗ್ರೆಸ್ ಮೇಲೆ ಹರಿಹಾಯಲು ಬಿಜೆಪಿ ಸಿದ್ಧತೆ ನಡೆಸಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಯಾವುದೇ ಪ್ರಕರಣಗಳನ್ನು ಎನ್ ಡಿಎ ಸರ್ಕಾರ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಖಂಡಿತ ಎರಡೂ ಪ್ರಕರಣಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಹಗರಣ ಸಂಬಂಧ ಬಿಜೆಪಿ-ಕಾಂಗ್ರೆಸ್ ವಾಗ್ದಾಳಿ ಮುಂದುವರೆದಿದ್ದು, ಚಾಪರ್ ಸಂಸ್ಥೆಯ ಸಿಬ್ಬಂದಿಗಳೇ ಬಹಿರಂಗವಾಗಿ ಲಂಚಕೊಟ್ಟ ಬಗ್ಗೆ ಹೇಳಿಕೆ ನೀಡಿರುವುದರಿಂದ ಎಕೆ ಆ್ಯಂಟನಿ ಅವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಕೂಡಲೇ ಲಂಚ ತೆಗೆದುಕೊಂಡ ಪ್ರಭಾವಿಗಳ ಹೆಸರನ್ನು ಬಹಿರಂಗ ಪಡಿಸಿಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಶರ್ಮಾ ಅವರು, ಯುಪಿಎ ಸರ್ಕಾರ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಫಿನ್ ಮೆಕಾನಿಕಾ ಮತ್ತು ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಅಲ್ಲದೆ 3600 ಕೋಟಿ ಮೌಲ್ಯದ ಒಪ್ಪಂದವನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿದೆ. ಅಂತೆಯೇ ಚಾಪರ್ ಖರೀದಿ ಸಂಬಂಧ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಗೆ ನೀಡಿದ್ದ ಬ್ಯಾಂಕ್ ಶೂರಿಟಿ ಹಣವನ್ನು ಬಡ್ಡಿ ಸಹಿತ ವಾಪಸ್ ನೀಡುವಂತೆ ಒತ್ತಾಯಿಸಿದೆ, ಹೀಗಿದ್ದೂ ಬಿಜೆಪಿ ಟೀಕೆ ಮಾಡುತ್ತಿರುವುದು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಚಾಪರ್ ಹಗರಣ ತೀರ್ಪು ಇದೀಗ ಸಂಸತ್ ನಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿಗೆ ಕಾರಣವಾಗಿರುವುದಂತೂ ನಿಜ..
Advertisement