ರೆಡಿಯಾಯ್ತು ಲೇಸರ್ ಬೇಲಿ: ಶುರುವಾಯ್ತು ಪಾಕ್ ಗೆ ತಲೆನೋವು

ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಮಾತುಕೊಟ್ಟು ಬಳಿಕ ಬೆನ್ನ ಹಿಂದೆ ಉಗ್ರರನ್ನು ಭಾರತದ ಮೇಲೆ ದಾಳಿಗೆ ಅಟ್ಟುವ ಪಾಕಿಸ್ತಾನದ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿರುವ ಭಾರತ ಇದೀಗ ತನ್ನ ರಕ್ಷಣೆಗಾಗಿ ಗಡಿಯಲ್ಲಿ ಲೇಸರ್ ಬೇಲಿಗಳನ್ನು ನಿರ್ಮಿಸಿದೆ...
ಇಂಡೋ-ಪಾಕ್ ಗಡಿಯಲ್ಲಿ ಲೇಸರ್ ಬೇಲಿ (ಸಂಗ್ರಹ ಚಿತ್ರ)
ಇಂಡೋ-ಪಾಕ್ ಗಡಿಯಲ್ಲಿ ಲೇಸರ್ ಬೇಲಿ (ಸಂಗ್ರಹ ಚಿತ್ರ)

ನವದೆಹಲಿ: ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಮಾತುಕೊಟ್ಟು ಬಳಿಕ ಬೆನ್ನ ಹಿಂದೆ ಉಗ್ರರನ್ನು ಭಾರತದ ಮೇಲೆ ದಾಳಿಗೆ ಅಟ್ಟುವ ಪಾಕಿಸ್ತಾನದ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿರುವ ಭಾರತ  ಇದೀಗ ತನ್ನ ರಕ್ಷಣೆಗಾಗಿ ಗಡಿಯಲ್ಲಿ ಲೇಸರ್ ಬೇಲಿಗಳನ್ನು ನಿರ್ಮಿಸಿದೆ.

ವಿಶ್ವದ ಅತ್ಯಂತ ಅಪಾಯಕಾರಿ ಗಡಿಗಳಲ್ಲಿ ಒಂದಾಗಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಇದರ ಮೊದಲ  ಹಂತವಾಗಿ ಪಂಜಾಬ್ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಭಾರತ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಬೇಲಿಗಳನ್ನು ನಿರ್ಮಿಸಿದೆ. ಭಾರತದತ್ತ ನಿರಂತರವಾಗಿ ಉಗ್ರರನ್ನು ಅಟ್ಟುತಲೇ ಇರುವ  ಪಾಕಿಸ್ತಾನಕ್ಕೆ ಈ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಬೇಲಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಭಾರತ ಇದೀಗ ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿದೆ.

ಕಳೆದ ಜನವರಿ 1 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ಪೈಶಾಚಿಕ ದಾಳಿ ಬಳಿಕ ಪಾಕಿಸ್ತಾನದ ಬೂಟಾಟಿಕೆ ಮಾತನ್ನು ನಂಬದ ಭಾರತ ಎಚ್ಚೆತ್ತಿದ್ದು, ತನ್ನ ಗಡಿ  ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುವುದಾಗಿ ಹೇಳಿತ್ತು. ಇದೀಗ ಕೊಟ್ಟ ಮಾತಿನಂತೆ ಕೇವಲ ನಾಲ್ಕೇ ತಿಂಗಳಲ್ಲಿ ಲೇಸರ್ ಬೇಲಿ ನಿರ್ಮಿಸಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ಈ  ಲೇಸರ್ ಬೇಲಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.

ಲೇಸರ್ ಬೇಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಇನ್ನು ಅತ್ಯಾಧುನಿಕ ತಂತ್ರಜ್ಞಾನದ ಈ ಲೇಸರ್ ಬೇಲಿ ಉಗ್ರರು ಹೇಗೇ ಗಡಿ ಪ್ರವೇಶ ಮಾಡಿದರೂ ಅದರ ಸಂಪೂರ್ಣ ಮಾಹಿತಿಯನ್ನು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ತಂತಿಬೇಲಿ  ಕತ್ತರಿಸಿ ಒಳನುಸುಳಿದರೆ, ಬೇಲಿ ಮೇಲಿಂದ ಹಾರಿದರೂ ಸರಿ ಕ್ಷಣಾರ್ಧದಲ್ಲಿ ಸೈನಿಕರಿಗೆ ಸಂದೇಶ ರವಾನೆಯಾಗುತ್ತದೆ. ಪ್ರಮುಖವಾಗಿ ಪಂಜಾಬ್ ಪ್ರಾಂತ್ಯದ ನದಿ ಮೂಲಕವಾಗಿ ಉಗ್ರರು  ಭಾರತದ ಗಡಿ ಪ್ರವೇಶಿಸಲು ಸುಲಭ ದಾರಿಯಾದ್ದರಿಂದ ಇಲ್ಲಿ ಲೇಸರ್ ಬೇಲಿ ಅಳವಡಿಕೆ ಮಾಡಲಾಗಿದೆ. ಹೀಗಾಗಿ ನೀರಿನಡಿ ಉಗ್ರರು ನುಸುಳಿದರೂ ಸರಿ ಆ ಮಾಹಿತಿ ಕ್ಷಣಾರ್ಧದಲ್ಲಿ ನಮ್ಮ  ಸೈನಿಕರನ್ನು ತಲಪುತ್ತದೆ.

ಕೊಟ್ಟ ಮಾತು ಉಳಿಸಿಕೊಂಡ ಕೇಂದ್ರ, ನಾಲ್ಕೇ ತಿಂಗಳಲ್ಲಿ ರೆಡಿಯಾಯ್ತು ಲೇಸರ್ ಬೇಲಿ
ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಭಾರತದ ಗಡಿಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಭದ್ರ ಪಡಿಸುವುದಾಗಿ  ಹೇಳಿತ್ತು. ಇದೀಗ ಕೊಟ್ಟ ಮಾತಿನಂತೆ ಕೇವಲ ನಾಲ್ಕೇ ತಿಂಗಳಲ್ಲಿ ಗಡಿಯಲ್ಲಿ ಲೇಸರ್ ಬೇಲಿ ಅಳವಡಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆ ಮೂಲಕ ಭಾರತದ ಗಡಿ  ಪ್ರದೇಶವನ್ನು ಮತ್ತಷ್ಟು ಸುರಕ್ಷಿತವಾಗಿಸಿದೆ. ಅಲ್ಲದೆ ಲೇಸರ್ ಬೇಲಿಯನ್ನು ಮುಂದಿನ ದಿನಗಳಲ್ಲಿ ಇತರೆ ಗಡಿ ಪ್ರದೇಶಗಳಲ್ಲೂ ವಿಸ್ತರಿಸುವುದಾಗಿ ಕೇಂದ್ರ ಹೇಳಿದ್ದು, ಆ ಕಾರ್ಯ ಶೀಘ್ರವಾಗಿ  ಆಗಲಿ ಎಂದು ಸೈನಿಕರು ಆಶಿಸುತ್ತಿದ್ದಾರೆ.

ಒಟ್ಟಾರೆ ವಿಶ್ವ ಸಮುದಾಯದ ಮುಂದೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿ ಬೆನ್ನ ಹಿಂದೆ ಭಾರತದ ವಿರುದ್ಧ ಉಗ್ರರ ಛೂ ಬಿಟ್ಟು ಯುದ್ಧ ಮಾಡುವ ಪಾಕಿಸ್ತಾನ ಕುತಂತ್ರಕ್ಕೆ ಭಾರತ  ದಿಟ್ಟ ಉತ್ತರ ನೀಡಿದ್ದು, ಪಾಕಿಸ್ತಾನ ಮತ್ತು ಐಎಸ್ ಐ ಸಂಸ್ಥೆ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com