
ನವದೆಹಲಿ: ಕಾಪ್ಟರ್ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಲು ಸ್ಪೋಟಕ ಮಾಹಿತಿಗಳನ್ನು ಕಲೆ ಹಾಕಿದ್ದು, ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮದ್ಯವರ್ತಿ ಮೈಕೆಲ್ ಸೇರಿದಂತೆ ಫಿನ್ ಮೆಕಾನಿಕಾ ಸಂಸ್ಥೆ ಮಾಜಿ ಸಿಇಒ ಓರ್ಸಿ ಹಲವು ಬಾರಿ ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ್ದರು ಎಂಬ ಮಾಹಿತಿಯನ್ನು ಕಲೆಹಾಕಿದ್ದಾರೆ.
ಮೂಲಗಳ ಪ್ರಕಾರ ಒಪ್ಪಂದಕ್ಕೆ ಕೇಂದ್ರ ರಕ್ಷಣಾ ಇಲಾಖೆ ಸಹಿ ಹಾಕಿದ ಬಳಿಕ ದುಬೈನಲ್ಲಿ ಮೈಕೆಲ್ ಸಭೆ ನಡೆಸಿದ್ದ ಮಾಹಿತಿ ಬಹಿರಂಗವಾಗಿದೆ. ಅಂತೆಯೇ ಕೈತಾನ್ ಸಂಸ್ಥೆಯ ಹೆಸರಲ್ಲಿ ನೊಂದಾವಣಿಯಾಗಿರುವ 9811****65 ಸಂಖ್ಯೆಯಿಂದ ಮೈಕೆಲ್ ಆಪ್ತ ಮತ್ತು ಮತ್ತೋರ್ವ ದಲ್ಲಾಳಿ ಗುಡೋ ರಾಲ್ ಹಶ್ಕೆ ಮೊಬೈಲ್ ಸಂಖ್ಯೆ 41763****89 2012ರಲ್ಲಿ ಕರೆ ಹೋಗಿದ್ದ ವಿಚಾರವನ್ನು ತನಿಖಾಧಿಕಾರಿಗಳು ಕಲೆ ಹಾಕಿದ್ದಾರೆ.
ಇನ್ನು ಖರೀದಿ ಒಪ್ಪಂದ ಮುಕ್ತಾಯದ ಬಳಿಕ ಕಿಕ್ ಬ್ಯಾಕ್ ಹಣದ ಷೇರಿನ ಕುರಿತ ಮಾತನಾಡಲು ಮೈಕೆಲ್ ತನ್ನ ಆಪ್ತ ಮತ್ತು ಮತ್ತೋರ್ವ ದಲ್ಲಾಳಿ ಗುಡೋ ರಾಲ್ ಹಶ್ಕೆ ಆಗಾಗ ದುಬೈ, ಜ್ಯೂರಿಚ್ ಮತ್ತು ದೆಹಲಿಗೆ ತೆರಳುತ್ತಿದ್ದರಂತೆ. ಈ ಭೇಟಿಯಲ್ಲಿ ಪ್ರಸ್ತುತ ಲಂಚ ಹಗರಣದಲ್ಲಿ ನಾಲ್ಕು ವರ್ಷಗಳ ಜೈಲು ವಾಸ ಶಿಕ್ಷೆ ಅನುಭವಿಸುತ್ತಿರುವ ಫಿನ್ ಮೆಕಾನಿಕಾ ಸಂಸ್ಥೆಯ ಮಾಜಿ ಸಿಇಒ ಓರ್ಸಿ ಕೂಡ ಭಾಗಿಯಾಗಿದ್ದನ್ನು ಎಂದು ತಿಳಿದುಬಂದಿದೆ.
ಮಾರ್ಚ್ 7 2005ರಂದು ದೆಹಲಿಗೆ ಬಂದಿದ್ದ ಮೈಕೆಲ್ ವಿವಿಐಪಿ ಒಪ್ಪಂದವನ್ನು ಅಗಸ್ಟಾ ವೆಸ್ಟ್ ಲ್ಯಾಂಡ್,ಸಂಸ್ಥೆಗೇ ನೀಡಲು ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದನಂತೆ. ಇದಾದ ಬಳಿಕ ಮತ್ತೆ ಏಪ್ರಿಲ್ 20 2005ರಲ್ಲಿ ಮತ್ತೆ ದೆಹಲಿಗೆ ಆಗಮಿಸಿದ್ದ ಮೈಕೆಲ್ ತನ್ನೊಂದಿಗೆ ಅಗಸ್ಚಾ ವೆಸ್ಟ್ ಲ್ಯಾಂಡ್ ಸಂಸ್ಥೆಯ ಅಧಿಕಾರಿ ಬ್ರುನೋ ಸ್ಪ್ಯಾಂಗ್ನೊಲಿನಿಯನ್ನು ಕೂಡ ಕರೆತಂದಿದ್ದ. ಪ್ರಸ್ತುತ ಬ್ರುನೋ ಸ್ಪ್ಯಾಂಗ್ನೊಲಿನಿಯನ್ನು ಕೂಡ ಇಟಲಿ ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಆತನಿಗೂ ನಾಲ್ಕು ವರ್ಷ ಸಜೆ ವಿಧಿಸಿದೆ.
ಈ ಭೇಟಿ ಬಳಿಕ ಮೈಕೆಲ್ ಶ್ರೀಲಂಕಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಸಂಖ್ಯೆ ಯುಎಲ್-192 ವಿಮಾನದಲ್ಲಿ ಕೊಲಂಬೋಗೆ ಹಾರಿದ್ದು, ಅದೇ ದಿನ ಬ್ರುನೋ ಸ್ಪ್ಯಾಂಗ್ನೊಲಿನಿ ಫ್ರಾಂಕ್ ಫರ್ಟ್ ಗೆ ಲುಫ್ತಾನ್ಸಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಸಂಖ್ಯೆ 755ರಲ್ಲಿ ಪ್ರಯಾಣಿಸಿದ್ದನಂತೆ. ಇನ್ನು ಫೆಬ್ರವರಿ 12, 2009ರಂದು ಮೈರೆಲ್ ಆಪ್ತ ಹಶ್ಕೆ ಲುಫ್ತಾನ್ಸಾ ಏರ್ ಲೈನ್ಸ್ ಸಂಸ್ಥೆ ವಿಮಾನ ಸಂಖ್ಯೆ 762ರಲ್ಲಿ ದೆಹಲಿಗೆ ಆಗಮಿಸಿದ್ದು, ಅದೇ ದಿನ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಅಂದಿನ ಸಿಇಒ ಓರ್ಸಿ ಫ್ರಾನ್ಸ್ ನಿಂದ ಏರ್ ಫ್ರಾನ್ಸ್ ಗೆ ಸೇರಿದ ವಿಮಾನ ಸಂಖ್ಯೆ ಎಎಫ್-192 ವಿಮಾನದ ಮೂಲಕವಾಗಿ ದೆಹಲಿಗೆ ಆಗಮಿಸಿದ್ದಾನೆ. ಈ ಸಮಯಕ್ಕಾಗಲೇ ಕೇಂದ್ರ ರಕ್ಷಣಾ ಇಲಾಖೆ ಕಾಪ್ಟರ್ ಖರೀದಿ ಸಂಬಂಧ ನಿರ್ಣಯ ತೆಗೆದುಕೊಳ್ಳಲು ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿತ್ತು ಎಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿಯೇ ಕಾಪ್ಟರ್ ಖರೀದಿ ಒಪ್ಪಂದಕ್ಕಾಗಿ ಕೇಂದ್ರ ರಕ್ಷಣಾ ಇಲಾಖೆ ಬ್ರಿಟನ್ ನಲ್ಲಿ ಕಾಪ್ಟರ್ ಗಳ ಸಾಮರ್ಥ್ಯ ಪರೀಕ್ಷೆ ಮಾಡುತ್ತಿತ್ತು. ಮತ್ತು ಈ ಸಂದರ್ಭದಲ್ಲಿ ಹಶ್ಕೆ ದೆಹಲಿಯಲ್ಲಿಯೇ ಇದ್ದ ವಿಚಾರವನ್ನು ಕೂಡ ತನಿಖಾ ಸಂಸ್ಥೆಗಳು ಹೊರಹಾಕಿವೆ. ಹೆಲಿಕಾಪ್ಟರ್ ಗಳ ಸಾಮರ್ಥ್ಯ ಪರೀಕ್ಷೆ ಮುಕ್ತಾಯದ ಬಳಿಕ ಅಂದರೆ ಫೆಬ್ರವರಿ 5, 2008ರಂದು ಮೈಕೆಲ್ ನನ್ನು ಭೇಟಿ ಮಾಡಲು ಫ್ಲೈ ಎಮಿರೇಟ್ಸ್ ಸಂಸ್ಥೆಯ ವಿಮಾನ ಸಂಖ್ಯೆ 543ರಲ್ಲಿ ದುಬೈಗೆ ವಾಪಸ್ಸಾಗಿದ್ದಾನೆ.
ಈ ಎಲ್ಲ ಮಾಹಿತಿಗಳು ಹೆಲಿಕಾಪ್ಟರ್ ಹಗರಣದಲ್ಲಿ ಭಾರತೀಯ ರಾಜಕಾರಣಿಗಳ ಕೈವಾಡವಿದೆ ಎಂಬುದನ್ನು ಬಲವಾಗಿ ಸ್ಪಷ್ಟಪಡಿಸುತ್ತಿವೆ ಎಂದು ಹೇಳಲಾಗುತ್ತಿದೆ.
Advertisement