
ಅಹಮದಾಬಾದ್: ಪಾಟೀದಾರ್ ಸಮುದಾಯ ಒಳಗೊಂಡಂತೆ ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಗುಜರಾತ್ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.
ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ವರ್ಷಕ್ಕೆ 6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವವವರಿಗೆ ಮೀಸಲಾತಿ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಾಟೀದಾರ್ ಸಮುದಾಯ ಸೇರಿದಂತೆ ಸಾಮಾನ್ಯ ವರ್ಗಗಳ ಕುಟುಂಬಗಳಿಗೆ ಅವರ ಆದಾಯದವನ್ನು ಪರಿಗಣಿಸಿ ಮೀಸಲಾತಿ ನೀಡಬೇಕೆಂದು ಹಲವಾರು ತಿಂಗಳುಗಳಿಂದ ಪಟೇಲ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗೆ ಕೊನೆಗೂ ಮಣಿದು ಗುಜರಾತ್ ಸರ್ಕಾರ ಈ ಘೋಷಣೆ ಮಾಡಿದೆ. ಸರ್ಕಾರದ ಅಧಿಸೂಚನೆಯನ್ನು ಮೇ 1ರಂದು ಗುಜರಾತ್ ಸ್ಥಾಪನೆ ದಿನದಂದು ಹೊರಡಿಸುವ ನಿರೀಕ್ಷೆಯಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಮೀಸಲಾತಿ ಜಾರಿಗೆ ಬರಲಿದೆ. ಈ ಹೊಸ ಮೀಸಲಾತಿ ಜಾರಿಯಿಂದ ಈಗಿರುವ ಎಸ್ ಸಿ/ ಎಸ್ಟಿ ಮತ್ತು ಒಬಿಸಿ ವರ್ಗಗಳ ಮೀಸಲಾತಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ ರೂಪಾನಿ ತಿಳಿಸಿದ್ದಾರೆ.
ಶೇಕಡಾ 10 ರಷ್ಟು ಮೀಸಲಾತಿ ನೀಡುವ ಸರ್ಕಾರದ ನಿರ್ಧಾರ ಕೇವಲ ಕಣ್ಣೊರೆಸುವ ತಂತ್ರವಷ್ಟೆ. ಇಷ್ಟು ದೊಡ್ಡ ಸಮುದಾಯಕ್ಕೆ ಶೇಕಡಾ 10 ಮೀಸಲಾತಿ ಸಾಕಾಗುವುದಿಲ್ಲ. ನಾವು ಶೇಕಡಾ 20ರಷ್ಟು ಮೀಸಲಾತಿಗೆ ಹೋರಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ತಿಳಿಸಿದೆ.
Advertisement