ಮುಂಬೈ: ಹಿಂದೂ ದೇವಸ್ಥಾನಗಳಲ್ಲಿ ಮಹಿಳೆಯರ ಪ್ರವೇಶದ ಹಕ್ಕಿಗಾಗಿ ಹೋರಾಡಿದ ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಮುಂಬೈನಲ್ಲಿರುವ ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಾಡಿದ ಯತ್ನ ವಿಫಲವಾಗಿದೆ.
ಹಿಂದೂ ದೇವಸ್ಥಾನಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಹಕ್ಕಿಗಾಗಿ ಹೋರಾಡಿ ಯಶಸ್ವಿಯಾದ ತೃಪ್ತಿ ದೇಸಾಯಿ, ದರ್ಗಾದ ಒಳಭಾಗವನ್ನು ಪ್ರವೇಶಿಸಲು ಮಹಿಳೆಯರಿಗೆ ಹಕ್ಕಿದೆ ಎಂದು ಹೇಳಿ, ಪ್ರವೇಶಿಸಲು ಮುಂದಾದರು, ಆದರೆ, ಇವರ ಯತ್ನ ವಿಫಲವಾಯಿತು.
ತದ ನಂತರ ಮಾತನಾಡಿದ ಅವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ. ಎಲ್ಲಾ ಪೂಜಾ ಸ್ಥಳಗಳಿಗೂ ಮಹಿಳೆಯರಿಗೆ ಪ್ರವೇಶ ಅವಕಾಶ ಸಿಗಬೇಕು ಎಂಬುದೇ ತಮ್ಮ ಉದ್ದೇಶ ಎಂದು ಅವರು ಸ್ಪಷ್ಟನೇ ನೀಡಿದ್ದಾರೆ.
ಮಹಿಳೆಯರ ಸಮಾನ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಪ್ರತಿಭಟನಾಕಾರರು ಸಂಘರ್ಷಕ್ಕೆ ಇಳಿಯಬಾರದು. ಶಾಂತಿಯುತವಾಗಿ ಹೋರಾಟ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ. ದರ್ಗಾದಲ್ಲೂ ಮಹಿಳೆಯರ ಪ್ರವೇಶ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.