
ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ಮತ್ತು ಮಾಜಿ ವಾಯುಪಡೆ ಉಪ ಮುಖ್ಯಸ್ಥ ಗುಜ್ರಾಲ್ ಅವರಿಗೆ ಸಿಬಿಐ ನೋಟಿಸ್ ನೀಡಿದೆ.
ಇದೇ ಮೊದಲ ಬಾರಿ ವಾಯುಪಡೆಯ ಮಾಜಿ ಮುಖ್ಯಸ್ಥರೊಬ್ಬರಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸಿಬಿಐ ನೋಟಿಸ್ ನೀಡಿದ್ದು, ಯಾವ ದಿನಾಂಕದಂದು ತ್ಯಾಗಿ ಅವರು ಇ.ಡಿ ಮುಂದೆ ತನಿಖೆಗೆ ಹಾಜರಾಗಬೇಕು ಎಂಬುದನ್ನು ಗೌಪ್ಯವಾಗಿ ಇರಿಸಲಾಗಿದೆ. ಆದರೆ ಮುಂದಿನ ವಾರ ಖುದ್ದಾಗಿ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
2013ರಿಂದಲೇ ತ್ಯಾಗಿ ಅವರು ಹೆಲಿಕಾಪ್ಟರ್ ಹಗರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆಯಾದರೂ ಹಗರಣ ಸಂಬಂಧ ಇಟಲಿ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ತ್ಯಾಗಿ ಅವರು ಸಿಬಿಐನಿಂದ ತನಿಖೆ ಎದುರಿಸಬೇಕಿದೆ. ಇನ್ನು ಇಟಲಿ ನ್ಯಾಯಾಲಯದ ತೀರ್ಪಿನಲ್ಲಿ ತ್ಯಾಗಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಘಾಟಾನುಘಟಿ ನಾಯಕ ಹೆಸರುಗಳು ಉಲ್ಲೇಖವಾಗಿದೆ ಎಂಬ ವರದಿಗಳು ಪ್ರಸಾರವಾದ ಹಿನ್ನಲೆಯಲ್ಲಿ ತ್ಯಾಗಿ ಅವರ ಸಿಬಿಐ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.
ಇನ್ನು ಮಾಜಿ ಸೇನಾ ಮುಖ್ಯಸ್ಥ ಜಿಎಸ್ ಗುಜ್ರಾಲ್ ಅವರಿಗೂ ಸಿಬಿಐ ನೋಟಿಸ್ ಜಾರಿ ಮಾಡಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Advertisement