
ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಗರಣದಲ್ಲಿ ಮತ್ತೋರ್ವ ದಲ್ಲಾಳಿ ಕಾರ್ಲೋ ಗೆರೋಸಾ ಪಾತ್ರದ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಭಾರತಕ್ಕೆ ಕಿಕ್ ಬ್ಯಾಕ್ ಹಣ ತಂದ ಆರೋಪದಲ್ಲಿ ಪ್ರವೀಣ್ ಬಕ್ಷಿ ಅವರ ಹೆಸರು ಕೇಳಿಬರುತ್ತಿದೆ.
ಸಿಬಿಐ ಕಲೆಹಾಕಿರುವ ಮಾಹಿತಿ ಪ್ರಕಾರ, ಪ್ರವೀಣ್ ಬಕ್ಷಿ ಅವರೇ ವಿವಿಐಪಿ ಕಾಪ್ಟರ್ ಹಗರಣದ ಕಿಕ್ ಬ್ಯಾಕ್ ಹಣವನ್ನು ಯಾರಿಗೂ ಅನುಮಾನ ಬಾರದಂತೆ ಭಾರತಕ್ಕೆ ತರುತ್ತಿದ್ದರಂತೆ. ಸಣ್ಣ ಸಣ್ಣ ಪ್ರಮಾಣದಲ್ಲಿ ಸ್ವತಃ ಪ್ರವೀಣ್ ಬಕ್ಷಿ ಅವರೇ ವಿದೇಶಕ್ಕೆ ಹಾರಿ ಹಣ ತರುತ್ತಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲವಂತೆ. ಇನ್ನು ಈ ಕಪ್ಪುಹಣವನ್ನು ಬಿಳಿಯಾಗಿ ಮಾಡಲು ಮಾಸ್ಟರ್ ಪ್ಲಾನ್ ಅನ್ನೇ ಸಿದ್ಧ ಪಡಿಸಿದ್ದ ಪ್ರವೀಣ್ ಬಕ್ಷಿ ಮಾರಿಷಸ್ ಮತ್ತು ಟ್ಯುನೀಷಿಯಾ ದೇಶಗಳಲ್ಲಿ ನಕಲಿ ಸಂಸ್ಥೆಗಳನ್ನು ಸೃಷ್ಟಿಸಿ ಆ ಬ್ಲೇಡ್ ಕಂಪನಿಗಳಿಂದ ಭಾರತಕ್ಕೆ ಕಪ್ಪುಹಣವನ್ನು ಬಿಳಿಯಾಗಿಸಿ ರವಾನಿಸುತ್ತಿದ್ದ ಎಂಬ ಮಹತ್ವದ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಿದ್ದಾರೆ.
ಸಿಬಿಐ ಗೆ ದೊರೆತಿರುವ ಮಾಹಿತಿಗಳ ಪ್ರಕಾರ 2007 ಆಗಸ್ಟ್ 7ರಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಪ್ರವೀಣ್ ಬಕ್ಷಿ ಲುಫ್ತಾನ್ಸಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಸಂಖ್ಯೆ 763ರಲ್ಲಿ ಮ್ಯೂನಿಚ್ ಗೆ ತೆರಳಿದ್ದರಂತೆ. ಇದಾದ ಒಂದೇ ವಾರದಲ್ಲಿ ಮತ್ತೆ ಟ್ಯುನೀಷಿಯಾ ದೇಶದಲ್ಲಿ ಸೃಷ್ಟಿಯಾಗಿದ್ದ ನಕಲಿ ಸಂಸ್ಥೆಯ ಮುಖಾಂತರ 2007 ಆಗಸ್ಟ್ 14ರಂದು 14 ಲಕ್ಷ ಹಣ ಮತ್ತು ಲುಫ್ತಾನ್ಸಾ ವಿಮಾನದ ಮೂಲಕವಾಗಿ ಭಾರತಕ್ಕೆ 2.18 ಕೋಟಿ ರು.ಹಣವನ್ನು ಪ್ರವೀಣ್ ಬಕ್ಷಿ ತಂದಿದ್ದರು ಎಂದು ಸಿಬಿಐ ಮೂಲಗಳ ತಿಳಿಸಿವೆ.
ಕೇವಲ ಮ್ಯೂನಿಚ್ ಮಾತ್ರವಲ್ಲದೇ ಬಕ್ಷಿ ಮಿಲನ್ ಗೂ ಕೂಡ ಭೇಟಿ ನೀಡಿ ಅಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಅಲ್ಲಿಂದಲೂ ಕಿಕ್ ಬ್ಯಾಕ್ ಹಣವನ್ನು ಭಾರತಕ್ಕೆ ತಂದಿದ್ದ. ಮಿಲನ್ ಗೆ ಬಕ್ಷಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತ ಸರ್ಕಾರದ ಅಗಸ್ಚಾ ವೆಸ್ಟ್ ಲ್ಯಾಂಡ್ ಸಂಸ್ಥೆಯೊಂದಿಗಿನ ಒಪ್ಪಂದ ನಿರ್ಣಾಯಕ ಘಟ ತಲುಪಿತ್ತು. ಈ ವೇಳೆ ಬಕ್ಷಿ ಮಿಲನ್ ಗೆ ಭೇಟಿ ಹೆಲಿಕಾಪ್ಟರ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದ ಎಂದು ತಿಳಿದುಬಂದಿದೆ.
2007ರ ಡಿಸೆಂಬರ್ 11ರಂದು ಕೆಎಲ್ ಎಂ ವಿಮಾನ ಸಂಖ್ಯೆ 872ರಲ್ಲಿ ಬಕ್ಷಿ ಅ್ಯಮ್ ಸ್ಟರ್ ಡ್ಯಾಮ್ ಗೆ ಪ್ರಯಾಣಿಸಿದ್ದ. ಈ ಪ್ರಯಾಣದ ಬಳಿಕ ಬಕ್ಷಿಗೆ ಸಂಬಂಧಿಸಿದ ಖಾತೆಗೆ ಟ್ಯುನಿಷಿಯಾ ಮೂಲದ ನಕಲಿ ಸಂಸ್ಥೆಯಿಂದ ಸುಮಾರು 85 ಲಕ್ಷ ರು.ಹಣ ವರ್ಗಾವಣೆಯಾಗಿತ್ತು. ಇದೇ ರೀತಿ ಬಕ್ಷಿ ನಾಲ್ಕು ಬಾರಿ ಹಣ ವರ್ಗಾವಣೆ ಮಾಡಿದ ಕುರಿತು ಸಿಬಿಐ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಬಕ್ಷಿ ಸಿಇಒ ಆಗಿದ್ದ ಏರೋ ಮೆಟ್ರಿಕ್ಸ್ ಸಂಸ್ಥೆ ಮುಖಾಂತರವಾಗಿಯೇ ಈ ಎಲ್ಲ ಹಣ ವರ್ಗಾವಣೆಯಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯ ಅಧಿಕಾರಿಗಳಿಂದ ಪಡೆದ ಕಿಕ್ ಬ್ಯಾಕ್ ಹಣವನ್ನು ಬಕ್ಷಿ ಹೇಗೆ ತನ್ನ ಏರೋ ಮೆಟ್ರಿಕ್ಸ್ ಸಂಸ್ಥೆಯ ಹಣವನ್ನಾಗಿ ಬದಲಾಯಿಸಿ ವರ್ಗಾವಣೆ ಮಾಡುತ್ತಿದ್ದ ಎಂಬ ವಿಚಾರದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಬಕ್ಷಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
Advertisement