ಪ್ರಯಾಣಿಕರ ಪ್ರಾಣ ಉಳಿಸಲು ಹೋದ ಅಗ್ನಿ ಶಾಮಕ ಸಿಬ್ಬಂದಿ ಸಾವು

ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾನೆ ಎಂದು ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ದೃಢಪಡಿಸಿದೆ.
ಲ್ಯಾಂಡಿಂಗ್ ವೇಳೆ ಬೆಂಕಿಗಾಹುತಿಯಾದ ವಿಮಾನ (ಐಎಎನ್ ಎಸ್ ಚಿತ್ರ)
ಲ್ಯಾಂಡಿಂಗ್ ವೇಳೆ ಬೆಂಕಿಗಾಹುತಿಯಾದ ವಿಮಾನ (ಐಎಎನ್ ಎಸ್ ಚಿತ್ರ)

ದುಬೈ: ಕೇರಳದ ತಿರುವನಂತಪುರದಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಸಂಸ್ಥೆಗೆ ಸೇರಿದ ವಿಮಾನವು ದುಬೈನ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ವೇಳೆ ಬೆಂಕಿ  ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲ 226 ಪ್ರಯಾಣಿಕರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ದುರಾದೃಷ್ಟವಶಾತ್ ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯಾಚರಣೆ  ನಡೆಸುತ್ತಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾನೆ ಎಂದು ವಿಮಾನ ಯಾನ ಸಂಸ್ಥೆ ದೃಢಪಡಿಸಿದೆ.

ಎಮಿರೇಟ್ಸ್ ವಿಮಾನ ಸಂಸ್ಥೆಯ ಬೋಯಿಂಗ್ 777 ವಿಮಾನ ದುಬೈ ಅಂತಾರಾಷ್ಟ್ರೀ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಲ್ಯಾಂಡಿಂಗ್ ಗೇರ್ ದೋಷದಿಂದಾಗಿ ವಿಮಾನದ  ಬಲಭಾಗ ರನ್‌ವೇಗೆ ಉಜ್ಜಿದೆ. ಹೀಗಾಗಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದೊಳಗೆ ದಟ್ಟ ಹೊಗೆ ಆವರಿಸಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಕೆಲಕಾಲ  ಆತಂಕಗೊಂಡರಾದರೂ, ವಿಮಾನದ ಸಿಬ್ಬಂದಿಗಳು ಕೂಡಲೇ ತುರ್ತು ನಿರ್ಗಮನದ ಬಾಗಿಲುಗಳನ್ನು ತೆರೆದ ಹಿನ್ನಲೆಯಲ್ಲಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ.

ಅಲ್ಲದೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ವೇಳೆ ಆರು ಮಂದಿ  ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ರಕ್ಷಿಸಲು ಹೋಗಿ ಸಾವನ್ನಪ್ಪಿದ ಅಗ್ನಿ ಶಾಮಕ ಸಿಬ್ಬಂದಿ
ಇನ್ನು ಬೆಂಕಿ ಹೊತ್ತಿದ್ದ ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದ ಅಗ್ನಿಶಾಮಕ ಸಿಬ್ಬಂದಿಯೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಎಮಿರೇಟ್ಸ್  ವಿಮಾನ ಸಂಸ್ಥೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಸಿಬ್ಬಂದಿ ಸಾವಿನ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸಿಬ್ಬಂದಿ ಸೇರಿ ವಿಮಾನದಲ್ಲಿದ್ದ 300 ಮಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಬೆಂಕಿ ಕಾಣಿಸಿ ಕೊಂಡ ತಕ್ಷಣ ತುರ್ತು ನಿರ್ಗಮನ ಮೂಲಕ ಪ್ರಯಾಣಿಕರನ್ನು ಕೆಳಗಿಳಿಸ ಲಾಯಿತು  ಎಂದು ಎಮಿರೇಟ್ಸ್ ಏರ್‌ಲೈನ್ಸ್ ತಿಳಿಸಿದೆ. ಆರು ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com