

ರಾಯ್ ಗಢ್: ಸಾವಿತ್ರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ ದುರಂತ ಪ್ರದೇಶದಲ್ಲಿ ಸೆಲ್ಫಿ ಕ್ಲಿಕ್ಕಿಸುವ ಮೂಲಕ ಮಹಾರಾಷ್ಟ್ರ ವಸತಿ ಸಚಿವ ಪ್ರಕಾಶ್ ಮೆಹ್ತಾ ಟೀಕೆಗೆ ಗುರಿಯಾಗಿದ್ದಾರೆ.
ದುರಂತ ಪ್ರದೇಶಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ವಿಪಕ್ಷ ನಾಯಕ ರಾಧಾಕೃಷ್ಣ ವಿಕೇ ಪಾಟೀಲ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಕಾಶ್ ಮೆಹ್ತಾ ಅವರು ಸೆಲ್ಫಿ ಕ್ಲಿಕ್ಕಿಸಿದ್ದರು.
ಇದೇ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ತಾಳ್ಮೆ ಕಳೆದುಕೊಂಡ ಪ್ರಕಾಶ್ ಮೆಹ್ತಾ ಅವರು ಮಾಧ್ಯಮ ಮಂದಿ ಮೇಲೆ ಹೌಹಾರಿದ್ದರು. ಇದರಿಂದಾಗಿ ಮಾಧ್ಯಮ ಮಂದಿ ಮೆಹ್ತಾ ಅವರ ಪತ್ರಿಕಾಗೋಷ್ಠಿಗೆ ಬಹಿಷ್ಕಾರ ಹಾಕಿದ್ದರು.
ದುರಂತದಲ್ಲಿ ಕೊಚ್ಚಿ ಹೋದ ಎರಡು ಬಸ್ ಹಾಗೂ ಕಾರಿಗಳ ಪತ್ತೆಗಾಗಿ ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೆ ಇತ್ತ ಸಚಿವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಮಾನವೀಯತೆ ಮರೆತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿ ಕೂಡಲೇ ಅವರ ರಾಜಿನಾಮೆ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತದಲ್ಲಿ ಎರಡು ಬಸ್ ಗಳು ಹಾಗೂ ಹಲವು ಕಾರುಗಳು ಕೊಚ್ಚಿಹೋಗಿದ್ದು ಸದ್ಯ 14 ಮಂದಿ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿವೆ.
Advertisement