ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಕರೆದೊಯ್ಯುವವರಿಗೆ ದೆಹಲಿ ಸರ್ಕಾರದಿಂದ ಬಹುಮಾನ

ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಸಹಾಯಕ್ಕೆ ಬರಲು ಜನರು ಹಿಂದೇಟು ಹಾಕುತ್ತಾರೆ. ಪೊಲೀಸರ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ನವದೆಹಲಿ: ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಸಹಾಯಕ್ಕೆ ಬರಲು ಜನರು ಹಿಂದೇಟು ಹಾಕುತ್ತಾರೆ. ಪೊಲೀಸರ ವಿಚಾರಣೆ, ಕೋರ್ಟ್, ಕಟ್ಲೆ ಎಂದು ಓಡಾಡಬೇಕು, ರಗಳೆ ಎಂದು ಅಪಘಾತಕ್ಕೊಳಗಾದವರ ನೆರವಿಗೆ ಹೋಗಲು ಹಿಂದೆಮುಂದೆ ನೋಡುತ್ತಾರೆ.
ಆದರೆ ಈ ಕುರಿತು ಮಹತ್ವದ ನಿರ್ಧಾರಕ್ಕೆ ಬಂದಿರುವ ದೆಹಲಿ ಸರ್ಕಾರ, ಸದ್ಯದಲ್ಲಿಯೇ ಯೋಜನೆಯೊಂದನ್ನು ಘೋಷಿಸಲಿದೆ. ಅದರಡಿ, ಆಟೋರಿಕ್ಷಾ, ಟ್ಯಾಕ್ಸಿ ಚಾಲಕರು ಸೇರಿದಂತೆ ಯಾರು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸುತ್ತಾರೋ ಅವರಿಗೆ ಪಾರಿತೋಷಕ ನೀಡಲಾಗುವುದು ಎಂದು ಘೋಷಿಸಿದೆ.
ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಕರಡೊಂದನ್ನು ಸಿದ್ದಪಡಿಸುತ್ತಿದ್ದು, ದೆಹಲಿ ನಗರದಲ್ಲಿ ರಸ್ತೆ ಅಪಘಾತಕ್ಕೀಡಾದವರಿಗೆ ನೆರವು ನೀಡುವವರಿಗೆ ಪ್ರೋತ್ಸಾಹ ಬಹುಮಾನ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಈ ತಿಂಗಳಾಂತ್ಯದಲ್ಲಿ ಕರಡನ್ನು ಸಂಪುಟದಲ್ಲಿ ಮಂಡಿಸಿ ನಂತರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಒಪ್ಪಿಗೆಗೆ ಕಳುಹಿಸಿಕೊಡಲಾಗುವುದು ಎಂದು ದೆಹಲಿ ಸರ್ಕಾರದ ಗೃಹ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಪಶ್ಚಿಮ ದೆಹಲಿಯ ಸುಭಾಷ್ ನಗರ ಪ್ರದೇಶದಲ್ಲಿ ವೇಗವಾಗಿ ಬಂದ ಡೆಲಿವರಿ ವ್ಯಾನ್ ಢಿಕ್ಕಿ ಹೊಡೆದು 35 ವರ್ಷದ ಸೆಕ್ಯುರಿಟಿ ಗಾರ್ಡ್ ನಿನ್ನೆ ಸಾವನ್ನಪ್ಪಿದ್ದರು. ಅಪಘಾತಕ್ಕೀಡಾಗಿ ಒಂದು ಗಂಟೆಯವರೆಗೂ ಆತನ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಅಲ್ಲದೆ ದಾರಿಯಲ್ಲಿ ಹೋದ ರಿಕ್ಷಾವಾಲನೊಬ್ಬ ಸೆಕ್ಯುರಿಟಿ ಗಾರ್ಡ್ ನ ಮೊಬೈಲ್ ಫೋನನ್ನು ಕದ್ದುಕೊಂಡು ಹೋಗಿದ್ದಾನೆ.
ಈ ಇಡೀ ಘಟನೆ ಸುಭಾಷ್ ನಗರದ ಮೆರಜ್ ಸಿನಿಮಾ ಹಾಲ್ ಪಕ್ಕ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. 
'' ಅಪಘಾತಕ್ಕೀಡಾದ ಸೆಕ್ಯುರಿಟಿ ಗಾರ್ಡ್ ನ ರಕ್ಷಣೆಗೆ ಯಾರೂ ಬಾರದಿದ್ದುದು ಒಂದು ದುರದೃಷ್ಟಕರ ಘಟನೆ. ಇದಕ್ಕಾಗಿ ಸರ್ಕಾರ ಒಂದು ಪ್ರೋತ್ಸಾಹಕ ಯೋಜನೆ ಜಾರಿಗೆ ತರುತ್ತಿದ್ದು, ಇದರಡಿ ಟ್ಯಾಕ್ಸಿ, ಆಟೋ ಚಾಲಕರು ಸೇರಿದಂತೆ ಯಾರು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೋ ಅವರಿಗೆ ಬಹುಮಾನ ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಸಹಾಯ ಮಾಡಿದವರನ್ನು ಪ್ರಶ್ನೆ ಮಾಡಿ, ಅವರಿಗೆ ಹಿಂಸೆ ನೀಡುವುದು ಇತ್ಯಾದಿಗಳನ್ನು ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಹೀಗಿರುವಾಗ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಿ ಎಂದು ನಾನು ಜನತೆಗೆ ಮನವಿ ಮಾಡುತ್ತೇನೆ ಎಂದು ಸಚಿವ ಸತ್ಯೇಂದ್ರ ಜೈನ್ ಹೇಳಿದರು.
ನಿನ್ನೆ ಬೆಳ್ಳಂಬೆಳಗ್ಗೆ 3 ಗಂಟೆ ಸುಮಾರಿಗೆ ಸೆಕ್ಯುರಿಟಿ ಗಾರ್ಡ್ ಮತಿಬುಲ್ ಕೆಲಸ ಮುಗಿಸಿ ತಿಹಾರ್ ಗ್ರಾಮದ ತನ್ನ ಮನೆಗೆ ಹಿಂತಿರುಗುತ್ತಿದ್ದ. ಆಗ ಹಿಂದಿನಿಂದ ವೇಗವಾಗಿ ಬಂದ ವ್ಯಾನೊಂದು ಢಿಕ್ಕಿ ಹೊಡೆದು ಮುಂದೆ ಹೋಯಿತು. ರಸ್ತೆಯಲ್ಲಿ ನಂತರ ಹೋದ ಯಾರೂ ಆತನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುವ ಮನಸ್ಸು ಮಾಡಲಿಲ್ಲ. ರಿಕ್ಷಾ ಚಾಲಕನೊಬ್ಬ ಆತನ ಬಳಿ ಬಂದು ಮೊಬೈಲ್ ಕದ್ದು ಪರಾರಿಯಾಗಿದ್ದ. ಈ ಇಡೀ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ನಂತರ ಪೊಲೀಸರಿಗೆ ಮಾಹಿತಿ ಸಿಕ್ಕಿ ಬೆಳಗ್ಗೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿ ನೋಡುವಾಗ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com