
ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ನೋಯ್ಡಾ ಹೌಸಿಂಗ್ ಯೋಜನೆ ಪ್ರಕರಣ ಸಂಬಂಧ ಗ್ರಾಹಕರಿಗೆ ಹಣ ವಾಪಸ್ ಮಾಡುವಂತೆ ಸುಪ್ರೀಂ ಕೋರ್ಟ್ ಖ್ಯಾತ ನಿರ್ಮಾಣ ಸಂಸ್ಥೆ ಯೂನಿಟೆಕ್ ಗೆ ಸೂಚನೆ ನೀಡಿದೆ.
ನೋಯ್ಡಾ ಹೌಸಿಂಗ್ ವಿವಾದ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಸಿ ನಾಗಪ್ಪನ್ ಅವರ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದ್ದು, ಕೂಡಲೇ ಗ್ರಾಹಕರಿಗೆ ಹಣ ವಾಪಸ್ ಮಾಡುವಂತೆ ಸೂಚನೆ ನೀಡಿದೆ. ಅಂತೆಯೇ ಹಣ ಪಡೆದು ನಿಗದಿತ ಸಮಯದೊಳಗೆ ನಿವಾಸಗಳನ್ನು ನೀಡದ ಹಿನ್ನಲೆಯಲ್ಲಿ ಯೂನಿಟೆಕ್ ಸಂಸ್ಥೆಯನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಆಗಸ್ಟ್ 12ರೊಳಗೆ ಗ್ರಾಹಕರಿಗೆ ಹಣ ವಾಪಸ್ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜೈಲಿಗಟ್ಟುವುದಾಗಿ ಎಚ್ಚರಿಕೆ ನೀಡಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.
ಅಂತೆಯೇ ಯೂನಿಟೆಕ್ ಸಂಸ್ಥೆಯಿಂದ ನಿವಾಸಗಳನ್ನು ಕೊಂಡಿರುವ ಗ್ರಾಹಕರು ಆಗಸ್ಟ್ 17ರೊಳಗೆ ತಮ್ಮ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ನೋಯ್ಡಾ ಮತ್ತು ಗುರಗಾಂವ್ ನಲ್ಲಿ ಯೂನಿಟೆಕ್ ಸಂಸ್ಥೆ ಬೃಹತ್ ಹೌಸಿಂಗ್ ಯೋಜನೆಯನ್ನು ಕೈಗೊಂಡಿದ್ದು, ಸುಮಾರು 24 ಅಧಿಕ ಮಂದಿ ಗ್ರಾಹಕರು ನಿವೇಶನಗಳನ್ನು ಕೊಂಡಿದ್ದರು. ಆದರೆ ಸಂಸ್ಥೆ ತಾನು ಘೋಷಿಸಿದ ಕಾಲಾವಕಾಶದೊಳಗೆ ನಿವೇಶನ ನೀಡಲು ವಿಫಲವಾದ್ದರಿಂದ ಹಲವರು ಗ್ರಾಹಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು. ಅಲ್ಲದೆ ಹಲವು ಗ್ರಾಹಕರು ತಮ್ಮ ಹಣ ವಾಪಸ್ ಮಾಡುವಂತೆ ಆಗ್ರಹಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಗ್ರಾಹಕ ರಕ್ಷಣಾ ನ್ಯಾಯಾಲಯ ಯೂನಿಟೆಕ್ ಸಂಸ್ಥೆಗೆ 5 ಕೋಟಿ ಮಧ್ಯಂತರ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಯೂನಿಟೆಕ್ ಸಂಸ್ಥೆ ಸುಪ್ರೀಂ ಕೋಟ್ ಮೆಟ್ಟಿಲೇರಿತ್ತು. ಇದೀಗ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಗ್ರಾಹಕರಿಗೆ ಹಣ ಮರಳಿಸುವಂತೆ ಆದೇಶಿಸಿದೆ.
Advertisement