ಸ್ವಾತಂತ್ರ್ಯೋತ್ಸವ ವೇಳೆ ಉಗ್ರ ದಾಳಿ ಭೀತಿ; ವಾಘಾ ಗಡಿಯಲ್ಲಿ ಭಾರಿ ಭದ್ರತೆ

70ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಭಾರಿ ವಿಧ್ವಂಸಕ ಕೃತ್ಯವೆಸಗಲು ಉಗ್ರಗಾಮಿ ಸಂಘಟನೆಗಳು ಸಂಚು ರೂಪಿಸಿರುವ ಕುರಿತು ಭದ್ರತಾ ಏಜೆನ್ಸಿಗಳು ಮಾಹಿತಿ ನೀಡಿದ ಬೆನ್ನಲ್ಲೇ ಭಾರತದ ವಾಘಾ ಗಡಿಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.
ವಾಘಾ ಗಡಿಯಲ್ಲಿ ವ್ಯಾಪಕ ಭದ್ರತೆ (ಸಂಗ್ರಹ ಚಿತ್ರ)
ವಾಘಾ ಗಡಿಯಲ್ಲಿ ವ್ಯಾಪಕ ಭದ್ರತೆ (ಸಂಗ್ರಹ ಚಿತ್ರ)

ಲಾಹೋರ್: 70ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಭಾರಿ ವಿಧ್ವಂಸಕ ಕೃತ್ಯವೆಸಗಲು ಉಗ್ರಗಾಮಿ ಸಂಘಟನೆಗಳು ಸಂಚು ರೂಪಿಸಿರುವ ಕುರಿತು  ಭದ್ರತಾ ಏಜೆನ್ಸಿಗಳು ಮಾಹಿತಿ ನೀಡಿದ ಬೆನ್ನಲ್ಲೇ ಭಾರತದ ವಾಘಾ ಗಡಿಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.

ಈ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆಗಳು ಹಾಗೂ ಖಾಸಗಿ ಭದ್ರತಾ ಸಂಸ್ಥೆಗಳು ನೀಡಿದ್ದ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ವಾಘಾಗಡಿ ಸೇರಿದಂತೆ ದೇಶದ ವಿವಿಧ ಗಡಿಗಳಲ್ಲಿನ ಭದ್ರತೆಯನ್ನು  ವ್ಯಾಪಕವಾಗಿ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪಾಕಿಸ್ತಾನದ ಭದ್ರತಾ ಸಂಸ್ಥೆ ಕೌಂಟರ್ ಟೆರರಿಸಂ ಏಜೆನ್ಸಿ ಉಗ್ರ ದಾಳಿಗೆ ಸಂಬಂಧಿಸಿದಂತೆ ಸುಳಿವು ನೀಡಿತ್ತು. ಕಳೆದ ಎರಡು ದಿನಗಳ  ಹಿಂದಷ್ಟೇ ದಾಳಿ ಬಗ್ಗೆ ಸುಳಿವು ನೀಡಿದ್ದ ಏಜೆನ್ಸಿ ಶನಿವಾರವೂ ಎಚ್ಚರಿಕೆ ನೀಡಿದ್ದು, ಯಾವುದೇ ಕ್ಷಣದಲ್ಲಿ ವಾಘಾ ಗಡಿಯಲ್ಲಿ ದಾಳಿ ನಡೆಯಬಹುದು. ಇಬ್ಬರು ತಾಲಿಬಾನ್ ಆತ್ಮಾಹುತಿ  ದಾಳಿಕೋರರು ಸಂಚು ರೂಪಿಸಿದ್ದಾರೆ ಎಂದು ಹೇಳಿದೆ.

ಮೂಲಗಳ ಪ್ರಕಾರ ಪಾಕಿಸ್ತಾನದ ಗಡಿಯಲ್ಲಿ ಸುಮಾರು 16 ಮಂದಿ ಆತ್ಮಹತ್ಯಾ ಬಾಂಬರ್ ಗಳು ಸಂಚು ರೂಪಿಸುತ್ತಿದ್ದು, ವಾಘಾಗಡಿಯಲ್ಲಿ ಇಬ್ಬರು ಫಜ್ಲುಲ್ಲಾ ಉಗ್ರ ಸಂಘಟನೆಯ ಉಗ್ರರು  ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಗಡಿ ಭದ್ರತೆಗಾಗಿ ವ್ಯಾಪಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಯೋಧರಿಗೆ ನೀಡಲಾಗಿದ್ದ ರಜೆಯನ್ನು  ಹಿಂಪಡೆದು ಅವರನ್ನು ಮತ್ತೆ ಸೇವೆಗೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ಗಡಿಯಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಳ ಮಾಡಿದೆ.

ಪ್ರಮುಖವಾಗಿ ಆಗಸ್ಟ್ 13,14,15ರಂದು ಯಾವುದೇ ಕ್ಷಣದಲ್ಲಿ ಲಾಹೋರ್​ನ ವಾಘಾ ಗಡಿ ಮತ್ತು ಕಸೂರ್​ನ ಗಂದಾ ಸಿಂಗ್ ಗಡಿಯಲ್ಲಿ ದಾಳಿ ನಡೆಸುವ ಸಾಧ್ಯತೆ ಎಂದು ಗುಪ್ತಚರ ಮೂಲಗಳು  ತಿಳಿಸಿರುವ ಹಿನ್ನಲೆಯಲ್ಲಿ ಈ ಭಾಗದ ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕಟ್ಟೆಚ್ಚರ  ವಹಿಸಲಾಗಿದ್ದು, ಕೆಂಪುಕೋಟೆಗೆ ಯೋಧರಿಂದ ಸರ್ಪಗಾವಲು ನಿಯೋಜನೆಗೊಂಡಿದೆ.

ಲಾಹೋರ್ ನಲ್ಲಿ 50ಕ್ಕೂ ಅಧಿಕ ಮಂದಿ ಶಂಕಿತರು ವಶಕ್ಕೆ
ಇದೇ ವೇಳೆ ವಾಘಾ ಗಡಿಗೆ ಹೊಂದಿಕೊಂಡಂತೆ ಇರುವ ಪಾಕಿಸ್ತಾನದ ಲಾಹೋರ್ ನಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಶಂಕಿತ ಉಗ್ರರನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದಾರೆ  ಎಂದು ತಿಳಿದುಬಂದಿದೆ. ಈ ಪೈಕಿ ಬಹುತೇಕರು ನೇರವಾಗಿ ಮತ್ತು ಪರೋಕ್ಷವಾಗಿ ಫಜ್ಲುಲ್ಲಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ 70ನೇ  ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎನ್ನುವ ಉಗ್ರರ ಸಂಚನ್ನು ವಿಫಲಗೊಳಿಸಲು ಭದ್ರತಾ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com