
ಪಣಜಿ: ತೀವ್ರ ಅನಾರೋಗ್ಯದಿಂದಾಗಿ ಗೋವಾ ಉಪ ಸ್ಪೀಕರ್ ವಿಷ್ಣುವಾಘ್ ಅವರನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸ್ವಾಂತತ್ರ್ಯೋತ್ಸವ ದಿನದ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ನಿನ್ನೆ ಭಾಗಿಯಾಗಿದ್ದ ವಾಘ್ ಅವರು ಕಾರ್ಯಕ್ರಮದಲ್ಲಿಯೇ ಎದೆ ನೋವು ಎಂದು ಹೇಳಿಕೊಂಡಿದ್ದಾರೆ. ಕೂಡಲೇ ಅವರನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಘ್ ಅವರು ಅತಿಯಾದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂದು ಜಿಎಂಸಿಹೆಚ್ ಮುಖ್ಯಸ್ಥ ಡಾ.ಪ್ರದೀಪ್ ನಾಯಕ್ ಅವರು ಹೇಳಿದ್ದಾರೆ.
ಪ್ರಾಥಮಿಕ ತಪಾಸಣೆ ನಂತರ ವಾಘ್ ಅವರಿಗೆ ಹೃದಯಸ್ತಂಭನವಾಗಿರುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದರು. ಸುದೀರ್ಘ ಪರೀಕ್ಷೆ ನಡೆಸಿದ ನಂತರ ಹೃದಯದಲ್ಲಿ ರಕ್ತನಾಳ ಬ್ಲಾಕ್ ಆಗಿರುವುದು ಕಂಡು ಬಂದಿಲ್ಲ ಎಂದರು. ಆಸ್ಪತ್ರೆಗೆ ಕರೆತರುತ್ತಿದ್ದಂತೆ ವಾಘ್ ಅವರು ಕುಸಿದು ಬಿದ್ದಿದ್ದರು. ಕೂಡಲೇ ವೈದ್ಯರ ತಂಡ ಅವರನ್ನು ಪರಿಶೀಲನೆ ನಡೆಸಿದ್ದರು ಎಂದು ಅವರು ಹೇಳಿದ್ದಾರೆ.
ಇದೇ ವರ್ಷದ ಮೇ ತಿಂಗಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದ ವಾಘ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಂದು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ವಾಘ್ ಅವರು ಅನಾರೋಗ್ಯಕ್ಕೀಡಾಗಿದ್ದಾರೆ.
Advertisement