ಲಂಚಕ್ಕಾಗಿ ಹಿರಿಯ ಅಧಿಕಾರಿಗಳಿಂದ ಕಿರುಕುಳ: ಗುಂಡು ಹಾರಿಸಿಕೊಂಡು ಎಸ್ ಐ ಆತ್ಮಹತ್ಯೆ

ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳ ದಿಂದ ಬೇಸತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ..
ರಾಮಕೃಷ್ಣಾ ರೆಡ್ಡಿ
ರಾಮಕೃಷ್ಣಾ ರೆಡ್ಡಿ

ಸಂಗಾರೆಡ್ಡಿ: ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳ ದಿಂದ ಬೇಸತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್  ತಮ್ಮದೇ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಮೇದಕ್ ಜಿಲ್ಲೆಯ ಕೊಂಡಪಾಕ ಮಂಡಲ್  ನಲ್ಲಿ ಪೊಲೀಸ್ ಅಧಿಕಾರಿ ರಾಮಕೃಷ್ಣ ರೆಡ್ಡಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಕೃಷ್ಣಾ ರೆಡ್ಡಿ ಪೊಲೀಸ್ ಇಲಾಖೆಗೆ ಸೇರುವ ಮೊದಲು ಸೇನೆಗೆ ಸೇರಿ ಡಿಎಸ್ ಪಿ ರ್ಯಾಂಕ್ ಅಧಿಕಾರಿಯಾಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಅನುಭವ ಕೂಡ ಇತ್ತು.

ಕೊಂಡಪಾಕ ಮಂಡಲ್​ನ ಕುಕುನುರ್ಪಳ್ಳಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಿರಿಯ ಅಧಿಕಾರಿಗಳ ಕಿರುಕುಳವ ಕಾರಣ ಎಂದು ಹೇಳಲಾಗಿದೆ.

ತಮ್ಮ ಸ್ನೇಹಿತರ ಬಳಿಯೂ ಸಹಿಸಿಕೊಳ್ಳಲಾಗದ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ.  ಪೊಲೀಸ್ ಕ್ವಾರ್ಟಸ್ ನಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಾಮಕೃಷ್ಣ ರೆಡ್ಡಿ ಎರಡು ದಿನಗಳ ಹಿಂದೆ  ತಮ್ಮ ಪತ್ನಿಯನ್ನು ಆಕೆ ತವರು ಮನೆಗೆ ಕಳುಹಿಸಿದ್ದರು.

ಬುಧವಾರ ರಾತ್ರಿ 1.30 ಕ್ಕೆ ಕೆಲಸ ಮುಗಿಸಿ ಕ್ವಾರ್ಟಸ್ ಗೆ ಬಂದ ರಾಮಕೃಷ್ಣಾ ರೆಡ್ಡಿ ತಮ್ಮ ಪತ್ನಿ ಹಾಗೂ ಇಬ್ಬರು ಕಾನ್ ಸ್ಟೇಬಲ್ ಗಳಿಗೆ ಫೋನ್ ಮಾಡಿ ಡಿಎಸ್ ಪಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಕಿರುಕುಳ ತಾಳಲಾಗುತ್ತಿಲ್ಲ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ವಿಷಯ ಕೇಳಿ ಅವರೆಲ್ಲರೂ ಪೊಲೀಸ್ ಕ್ವಾರ್ಟಸ್ ಗೆ ಬರುವಷ್ಟರಲ್ಲಿ ಸಮಯ ಮೀರಿತ್ತು. ಗುಂಡು ಹಾರಿಸಿಕೊಂಡಿದ್ದರು ಎಂದು ವರದಿಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಾಗಲೇ ರಾಮಕೃಷ್ಣ ಕೊನೆಯುಸಿರೆಳೆದಿದ್ದರು ಎಂದು ವರದಿಯಾಗಿದೆ.

ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿಎಸ್​ಪಿ ಮತ್ತು ಸರ್ಕಲ್ ಇನ್ಸ್​ಪೆಕ್ಟರ್ ಅವರ ಹೆಸರು ಡೆತ್ ನೋಟ್​ನಲ್ಲಿದೆ ಎಂದು ಹೇಳಲಾಗಿದೆ.ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com