
ನವದೆಹಲಿ: ಮುಂಬೈ ದಾಳಿಯ ಪ್ರಮುಖ ರುವಾರಿ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಇಸ್ಲಾಮಿಕ್ ಸೆಮಿನರಿ ಹೊರಡಿಸಿರುವ ಫತ್ವಾವನ್ನು ಕಾಂಗ್ರೆಸ್ ಸ್ವಾಗತಿಸಿದೆ.
ಹಫೀಜ್ ವಿರುದ್ಧ ಹೊರಡಿಸಲಾಗಿರುವ ಫತ್ವಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ ಅವರು, ಮುಸ್ಲಿಂ ನಾಯಕತ್ವದಲ್ಲಿ ಈ ರೀತಿಯ ಉಗ್ರರನ್ನು ನಿರ್ಮೂಲನೆ ಮಾಡಬೇಕಿದೆ. ಇದೊಂದು ಒಪ್ಪುವಂತಹ ಪ್ರಕರಣವಾಗಿದೆ.
ಒಬ್ಬ ಮುಸ್ಲಿಂ ನಾಯಕ ಹಾಗೂ ಉಗ್ರನ ವಿರುದ್ಧ ಮೊದಲ ಬಾರಿಗೆ ಫತ್ವಾವವನ್ನು ಹೊರಡಿಸಲಾಗಿದೆ ಪಾಕಿಸ್ತಾನದಲ್ಲಿ ಕುಳಿತು ಭಾರತದ ವಿರುದ್ಧ ವಿಧ್ವಂಸಕ ಕೃತ್ಯವೆಸಗುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಫತ್ವಾ ಉತ್ತಮ ಸಂದೇಶವಾಗಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ಬರೇಲ್ವಿ ಪಂಥದ ಇಸ್ಲಾಂ ಧಾರ್ಮಿಕ ಸಂಸ್ಥೆಯೊಂದು ಹಫೀಜ್ ಸಯೀದ್ ವಿರುದ್ಧ ಫತ್ವಾವೊಂದನ್ನು ಹೊರಡಿಸಿತ್ತು. ಮುಫ್ತಿ ಮೊಹಮ್ಮದ್ ಸಲೀಂ ಬರೇಲ್ವಿ ಎಂಬ ಇಸ್ಲಾಂ ವಿದ್ವಾಂಸ ಹಫೀಜ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಮುಸ್ಲಿಮರು ಸಯೀದ್ ನನ್ನು ಎಂದಿಗೂ ಪರಿಗಣಿಸಬಾರದು, ಆತನ ಸಿದ್ದಾಂತಗಳನ್ನು ಪಾಲನೆ ಮಾಡಬಾರದು. ಸಯೀದ್ ನನ್ನು ಇಸ್ಲಾಂ ಧರ್ಮದಿಂದ ಹೊರಹಾಕಲಾಗಿದೆ. ಆತನೊಬ್ಬ ಇಸ್ಲಾಂ ವಿರೋಧಿಯಾಗಿದ್ದು ಆತನನ್ನು ಹಿಂಬಾಲಿಸುವುದು ಮತ್ತು ಮುಸ್ಲಿಂನೆಂದು ಪರಿಗಣಿಸುವುದು ಅಕ್ರಮ ಹಾಗೂ ಅಪರಾಧವಾಗಿದೆ ಎಂದು ಫತ್ವಾದಲ್ಲಿ ಹೇಳಿದ್ದಾರೆ.
Advertisement