ವಾರಣಾಸಿ: ನರಸಿಂಗ್ ಯಾದವ್ ನಿಷೇಧದ ಹಿಂದೆ ಕಾಣದ ಕೈಗಳ ಪಾತ್ರವಿದ್ದು, ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ತಮ್ಮ ಪುತ್ರನಿಗೆ ನ್ಯಾಯ ಕೊಡಿಸಬೇಕು ಎಂದು ನಿಷೇಧಕ್ಕೊಳಗಾಗಿರುವ ಕುಸ್ತಿಪಟು ನರಸಿಂಗ್ ಯಾದವ್ ಅವರ ಪೋಷಕರು ಆಗ್ರಹಿಸಿದ್ದಾರೆ.
ನರಸಿಂಗ್ ಯಾದವ್ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಿದ ವಿಚಾರ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತಿರುವ ಬೆನ್ನಲ್ಲೇ ಪ್ರಕರಣ ಕುರಿತು ತಮ್ಮ ಆಘಾತ ವ್ಯಕ್ತಪಡಿಸಿರುವ ನರಸಿಂಗ್ ಯಾದವ್ ಅವರ ತಾಯಿ ಭುಲ್ನಾದೇವಿ ಅವರು, ಈಗಷ್ಟೇ ನನಗೆ ವಿಷಯ ತಿಳಿಯಿತು. ಆದರೆ ನನ್ನ ಮಗನಿಗೇ ಹೀಗೆಲ್ಲಾ ಏಕೆ ಜರುಗುತ್ತಿದೆ ಎಂದು ನನಗರ್ಥವಾಗುತ್ತಿಲ್ಲ. ಆರಂಭದಿಂದಲೂ ಈ ಪ್ರಕರಣವನ್ನು ಗಮನಿಸಿದರೆ ಖಂಡಿತ ಇಲ್ಲಿ ಕಾಣದ ಕೈಗಳ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ನಾಡಾ ಕ್ಲೀನ್ ಚಿಟ್ ನೀಡಿದ್ದರೂ, ವಾಡಾ ನನ್ನ ಮಗನ ಮೇಲೆ ಕ್ರಮ ಜರುಗಿಸಿದೆ ಎಂಬುದು ತಿಳಿಯುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನರಸಿಂಗ್ ಯಾದವ್ ತಂದೆ ಪಂಚಮ್ ಯಾದವ್ ಅವರು, ಸುದ್ದಿ ಕೇಳಿ ನನಗೆ ಪದಗಳೇ ಬರುತ್ತಿಲ್ಲ. ನಿಜಕ್ಕೂ ನನಗೆ ಆಘಾತವಾಗಿದೆ. ಒಲಿಪಿಂಕ್ಸ್ ನಲ್ಲಿ ಪಾಲ್ಗೊಳ್ಳಬೇಕು ಎಂದು ನನ್ನ ಮಗ ಕಳೆದ ನಾಲ್ಕು ವರ್ಷಗಳಿಂದ ತಯಾರಿ ನಡೆಸಿದ್ದ. ಕಠಿಣ ತರಬೇತಿಯ ಹೊರತಾಗಿಯೂ ಅಂತಿಮ ಕ್ಷಣದಲ್ಲಿ ಆತನನ್ನು ನಿಷೇಧಿಸಲಾಗಿದೆ. ಆತನ ವಿರುದ್ಧ ದೊಡ್ಡ ಮಟ್ಟದಲ್ಲಿ ಕುತಂತ್ರ ನಡೆಸಲಾಗುತ್ತಿದ್ದು, ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ತಮ್ಮ ಮಗನಿಗೆ ನ್ಯಾಯಾ ಒದಗಿಸಿಕೊಡಬೇಕು ಮತ್ತು ಒಲಿಂಪಿಕ್ಸ್ ನಲ್ಲಿ ನರಸಿಂಗ್ ಯಾದವ್ ಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಾಡಾ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ವಾಡಾ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸಿಎಎಸ್ ಕುಸ್ತಿಪಟು ನರಸಿಂಗ್ ಯಾದವ್ ಗೆ ನಾಲ್ಕು ವರ್ಷಗಳ ನಿಷೇಧ ಹೇರಿತ್ತು.
Advertisement