ಡಿಎಂಕೆ ಶಾಸಕರ ಅಮಾನತು ರದ್ದುಗೊಳಿಸಲು ಸ್ಪೀಕರ್‌ ಮತ್ತೆ ನಕಾರ

ಡಿಎಂಕೆಯ 80 ಶಾಸಕರ ಅಮಾನತು ಆದೇಶವನ್ನು ರದ್ದುಗೊಳಿಸಲು ತಮಿಳುನಾಡು ವಿಧಾನಸಭೆ ಸ್ಪೀಕರ್‌ ಪಿ.ಧನಪಾಲ್‌...
ಅಮಾನತುಗೊಂಡ ಡಿಎಂಕೆ ಶಾಸಕರನ್ನು ಸದನದಿಂದ ಹೊರ ಹಾಕುತ್ತಿರುವುದು(ಸಂಗ್ರಹ ಚಿತ್ರ)
ಅಮಾನತುಗೊಂಡ ಡಿಎಂಕೆ ಶಾಸಕರನ್ನು ಸದನದಿಂದ ಹೊರ ಹಾಕುತ್ತಿರುವುದು(ಸಂಗ್ರಹ ಚಿತ್ರ)
ಚೆನ್ನೈ: ಡಿಎಂಕೆಯ 80 ಶಾಸಕರ ಅಮಾನತು ಆದೇಶವನ್ನು ರದ್ದುಗೊಳಿಸಲು ತಮಿಳುನಾಡು ವಿಧಾನಸಭೆ ಸ್ಪೀಕರ್‌ ಪಿ.ಧನಪಾಲ್‌ ಅವರು ಶುಕ್ರವಾರ ಮತ್ತೆ ನಿರಾಕರಿಸಿದ್ದಾರೆ.
ಅಮಾನತು ಆದೇಶವನ್ನು ಮರು ಪರಿಶೀಲಿಸಬೇಕು ಎಂಬ ಮನವಿಯನ್ನು ಸ್ಪೀಕರ್ ಇಂದು ಸಹ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಒಂದು ಕಡೆ ಅಮಾನತುಗೊಂಡಿರುವ ಡಿಎಂಕೆ 80 ಶಾಸಕರು ನಿನ್ನೆಯಿಂದ ವಿಧಾನ ಸಭೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಅಮಾನತುಗೊಳ್ಳದ 9 ಶಾಸಕರ ಪೈಕಿ ಏಳು ಶಾಸಕರು ಎರಡು ಬಾರಿ ಸದನದಿಂದ ಹೊರನಡೆದಿದ್ದರು.
ಇಂದು ಡಿಎಂಕೆಯ ಕೆ.ಎನ್. ನೆಹರೂ ಅವರು ತಮ್ಮ ಪಕ್ಷದ ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದರು. ಆದರೆ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸ್ಪೀಕರ್, ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮಾನತುಗೊಳ್ಳದ ಏಳು ಡಿಎಂಕೆ ಸದಸ್ಯರು, ಕಾಂಗ್ರೆಸ್‌ ಹಾಗೂ ಐಯುಎಂಎಲ್‌ ಸದಸ್ಯರು ಒಟ್ಟಾಗಿ ಸೇರಿ 80 ಡಿಎಂಕೆ ಸದಸ್ಯರ ಅಮಾನತು ಆದೇಶವನ್ನು ಮರುಪರಿಶೀಲಿಸಬೇಕು ಎಂದು ನಿನ್ನೆ ಸ್ಪೀಕರ್‌ಗೆ ಮನವಿ ಮಾಡಿದ್ದರು. ಆದರೆ ಸ್ಪೀಕರ್ ಧನಪಾಲ್ ಅವರನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.
‘ಡಿಎಂಕೆ ಸದಸ್ಯರು ಉದ್ದೇಶವಿಲ್ಲದೇ ಮಾತನಾಡಿದ್ದಾರೆ. ಸದನದಲ್ಲಿ ಅವರ ವರ್ತನೆಯ ವಿಡಿಯೊ ದೃಶ್ಯಾವಳಿಯ ದಾಖಲೆಗಳಿವೆ.  ಬೇರೆ ಯಾವುದೇ ಮಾರ್ಗವಿಲ್ಲದೇ ಅವರನ್ನು ಅಮಾನತು ಮಾಡಲಾಯಿತು. ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ. ನಿಯಮಾವಳಿ ಪ್ರಕಾರವೇ ಸದನ ಕಾರ್ಯನಿರ್ವಹಿಸುತ್ತದೆ’ ಎಂದು ಸ್ಪೀಕರ್‌ ಹೇಳಿದ್ದಾರೆ.
ಈ ಮಧ್ಯೆ ಅಮಾನತು ಮಾಡಿರುವುದನ್ನು ಖಂಡಿಸಿ ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಡಿಎಂಕೆ ಸದಸ್ಯರು ಇಂದು ತಮಿಳುನಾಡು ವಿಧಾನಸಭೆಯ ಹೊರಗೆ 'ಮಾದರಿ ವಿಧಾಸಭೆ' ನಿರ್ಮಿಸಿ, ಅಣಕು ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com