

ನವದೆಹಲಿ: ಎಲ್ಲವೂ ಕೇಂದ್ರ ಸರ್ಕಾರ ಅಂದುಕೊಂಡಂತೆ ನಡೆದರೆ ಇನ್ನು ಮುಂದಿನ ದಿನಗಳಲ್ಲಿ ಕೇಂದ್ರ ಬಜೆಟ್ ಜನವರಿ ಅಂತ್ಯಕ್ಕೆ ಮಂಡನೆಯಾಗಲಿದೆ.
ಬ್ರಿಟಿಷ್ ಪರಂಪರೆಯ ಭಾಗವಾಗಿ ಈ ವರೆಗೂ ಫೆಬ್ರವರಿ ಅಂತ್ಯಕ್ಕೆ ಮಂಡನೆಯಾಗುತ್ತಿದ್ದ ಕೇಂದ್ರ ಬಜೆಟ್ ಮಂಡನೆಯಾಗುತ್ತಿತ್ತು. ಪ್ರತಿ ವರ್ಷದ ಮಾರ್ಚ್ 31 ಕ್ಕೆ ಹಣಕಾಸು ಆರ್ಥಿಕ ವರ್ಷ ಮುಕ್ತಾಯಗೊಳ್ಳುತ್ತಿತ್ತು. ಆದರೆ ಫೆಬ್ರವರಿಯ ಅಂತ್ಯಕ್ಕೆ ಬಜೆಟ್ ಮಂಡನೆಯಾಗುತ್ತಿದ್ದ ಪರಿಣಾಮ, ಅನುದಾನ ಹಂಚಿಕೆ ಹಾಗೂ ಅದನ್ನು ಬಳಕೆ ಮಾಡುವುದಕ್ಕಾಗಿ ವಿವಿಧ ಇಲಾಖೆಗಳು ಮೇ ತಿಂಗಳ ವರೆಗೂ ಕಾಯಬೇಕಿತ್ತು.
ಅನುದಾನ ಹಂಚಿಕೆ ಹಾಗೂ ಬಳಕೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಣಕಾಸು ವರ್ಷ ಪ್ರಾರಂಭವಾಗುವುದಕ್ಕೂ ಮುನ್ನವೇ ಬಜೆಟ್ ನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಿದೆ. ಇದರ ಭಾಗವಾಗಿ ಫೆಬ್ರವರಿ ಬದಲು ಜನವರಿ ತಿಂಗಳ ಅಂತ್ಯಕ್ಕೆ ಬಜೆಟ್ ನ್ನು ಮಂಡನೆ ಮಾಡಲು ಉದ್ದೇಶಿಸಲಾಗಿದೆ.
ಪ್ರಸ್ತುತ ಬಜೆಟ್ ನ ಪ್ರಕ್ರಿಯೆಗಳು ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಅಂತಿಮಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ತಯಾರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಜನವರಿಯ ಅಂತ್ಯದಲ್ಲಿ ಬಜೆಟ್ ಮಂಡನೆ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆಯಂತೆ. ಕೇಂದ್ರ ಸರ್ಕಾರದ ಹಣಕಾಸು ನೀತಿ ಬದಲಾವಣೆಯ ಭಾಗವಾಗಿ ಬಜೆಟ್ ಮಂಡನೆ ದಿನಾಂಕ ಸಹ ಬದಲಾವಣೆಯಾಗುವ ಸಾಧ್ಯತೆ ಇದೆ.