ಕಿರಿಯ ವಿದ್ಯಾರ್ಥಿಗಳನ್ನು ಬೆತ್ತಲುಗೊಳಿಸಿ ಬಿಯರ್ ಕುಡಿಸಿದ ಹಿರಿಯ ವಿದ್ಯಾರ್ಥಿಗಳು: ವೈದ್ಯಕೀಯ ವಿದ್ಯಾರ್ಥಿ ಆರೋಪ

ರ‍್ಯಾಗಿಂಗ್‌ ತಡೆಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರುತ್ತಿದ್ದರೂ, ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಮಾಡುವ ರ‍್ಯಾಗಿಂಗ್‌ ಪ್ರಕರಣಗಳು ಹೆಚ್ಚುತ್ತಲೇ ಬರುತ್ತಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಯಮತ್ತೂರು: ರ‍್ಯಾಗಿಂಗ್‌ ತಡೆಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರುತ್ತಿದ್ದರೂ, ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಮಾಡುವ ರ‍್ಯಾಗಿಂಗ್‌ ಪ್ರಕರಣಗಳು ಹೆಚ್ಚುತ್ತಲೇ ಬರುತ್ತಿವೆ.

ಕೊಯಮತ್ತೂರಿನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ವೊಂದರಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್‌ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿದೆ.

ರ‍್ಯಾಗಿಂಗ್‌ ಕುರಿತಂತೆ ವೈದ್ಯಕೀಯ ವಿದ್ಯಾರ್ಥಿಯೊಬ್ಬ ರಾಷ್ಟ್ರೀಯ ರ‍್ಯಾಗಿಂಗ್‌ ತಡೆಗೆ ಕಳೆದ ಗುರುವಾರ ಪತ್ರವೊಂದನ್ನು ಬರೆಯುವ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಕಾಲೇಜಿಗೆ ಸೇರಿದ ನಂತರ ಹಾಸ್ಟೆಲ್ ನಲ್ಲಿ ನಮ್ಮದು ಮೊದಲ ದಿನವಾಗಿತ್ತು. ಮೊದಲ ದಿನದಂದೇ ಹಿರಿಯ ವಿದ್ಯಾರ್ಧಿಗಳು ನಮ್ಮ ಮೇಲೆ ರ‍್ಯಾಗಿಂಗ್‌ ಮಾಡಲು ಆರಂಭಿಸಿದ್ದರು. ರೂಮಿಗೆ ಬರುವಂತೆ ತಿಳಿಸಿದ ಹಿರಿಯ ವಿದ್ಯಾರ್ಥಿಗಳು, ನಂತರ ನಮ್ಮ ಒಳ ಬಟ್ಟೆಗಳನ್ನು ಬಿಚ್ಚುವಂತೆ ತಿಳಿಸಿದರು.

ನಂತರ ಫಾರ್ಮಲ್ ಬಟ್ಟೆಗಳನ್ನು ತೊಡುವಂತೆ ಹೇಳಿದರು. ಇದಕ್ಕೆ ನಿರಾಕರಿಸಿದಾಗ ಬಲವಂತವಾಗಿ ಬಟ್ಟೆಗಳನ್ನು ತೊಡಿಸಿದರು. ಇದಲ್ಲದೆ ಸಿಗರೇಟ್, ಬಿಯರ್ ತರುವಂತೆ ನಮಗೆ ತಿಳಿಸಿದರು. ತಂದುಕೊಟ್ಟ ನಂತರ ಬಲವಂತವಾಗಿ ನಮ್ಮ ಬಾಯಿಯೊಳಗೆ ಬಿಯರ್ ನ್ನು ಸುರಿದರು ಎಂದು ಹೇಳಿಕೊಂಡಿದ್ದಾನೆ.

ವೈದ್ಯಕೀಯ ಕಾಲೇಜುಗಳಲ್ಲಿ ರ‍್ಯಾಗಿಂಗ್‌ ಎಂಬುವುದು ಸಾಮಾನ್ಯವೆಂಬ ಭಾವನೆ ಇಲ್ಲಿನ ಸರ್ಕಾರ ಹಾಗೂ ಸಾರ್ವಜನಿಕರಿಗಿದೆ. ರ‍್ಯಾಗಿಂಗ್‌ ಎಂಬುವುದು ಒಬ್ಬ ವ್ಯಕ್ತಿಯನ್ನು ಉತ್ತಮ ವೈದ್ಯನನ್ನಾಗಿ ಮಾಡುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ನಾನು ಕೂಡ ಎರಡನೇ ವರ್ಷದ ಪದವಿಗೆ ಕಾಲಿಡುತ್ತೇನೆ. ನಮ್ಮ ತರಗತಿ ವಿದ್ಯಾರ್ಥಿಗಳು ಕೂಡ ಮುಂದೆ ಬರುವ ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್‌ ಮಾಡುತ್ತಾರೆ. ಇದು ಹೀಗೆಯೇ ಮುಂದುವರೆಯುತ್ತದೆ. ಹೀಗಾಗಿ ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಿ ರ‍್ಯಾಗಿಂಗ್‌ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ.

ಇನ್ನು ವಿದ್ಯಾರ್ಥಿ ನೀಡಿರುವ ದೂರು ಕುರಿತಂತೆ ಪ್ರತಿಕ್ರಿಯೆ ನೀಡಿರುವ, ಕಾಲೇಜು ಮುಖ್ಯಸ್ಥ ಎ.ಅಡ್ವಿನ್ ಜೋ ಅವರು, ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್‌ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ರ‍್ಯಾಗಿಂಗ್‌ ವಿರೋಧಿ ತಡೆಗೆ ಪ್ರತಿಕ್ರಿಯೆ ನೀಡಲಾಗಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ಕಾಲೇಜು ಹಾಸ್ಟೆಲ್ ಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್‌ ಮಾಡುವ ಘಟನೆಗಳು ನಡೆಯುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಹಿಂದೆ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಹಾಸ್ಟೆಲ್ ಗಳನ್ನು ನೀಡಲಾಗಿತ್ತು. ಇದೀಗ ಮತ್ತೆ ಕಿರಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸೌಲಭ್ಯಗಳೊಂದಿಗೆ ಹಾಸ್ಟೆಲ್ ನೀಡುತ್ತಿದ್ದೇವೆ. ಈ ಹಾಸ್ಟೆಲ್ ಗಳಿಗೆ ಹಿರಿಯ ವಿದ್ಯಾರ್ಥಿಗಳ ಪ್ರವೇಶವಿರುವುದಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ರ‍್ಯಾಗಿಂಗ್‌ ವಿರೋಧಿ ತಡೆಯಿಂದಲೇ ವಿದ್ಯಾರ್ಥಿ ಗುರ್ತಿಕೆ ಬಹಿರಂಗ

ದೂರು ನೀಡಿದ ವ್ಯಕ್ತಿಯ ಗುರ್ತಿಕೆಯನ್ನು ಎಲ್ಲಿಯೂ ಬಹಿರಂಗ ಪಡಿಸಬಾರದೆಂದು ಯುಜಿಸಿಯು ರ‍್ಯಾಗಿಂಗ್‌ ವಿರುದ್ಧದ ನಿಯಮಾವಳಿಗಳಲ್ಲಿ ಕಟ್ಟುನಿಟ್ಟಾಗಿ ನಿರ್ದೇಶಿಸಿದೆ. ಇದರಂತೆ ದೂರು ನೀಡಿದ ವಿದ್ಯಾರ್ಥಿಯ ಕುರಿತಂತೆ  ಗೌಪ್ಯತೆಯನ್ನು ಕಾಪಾಡುವುದು ರಾಷ್ಟ್ರೀಯ ರ‍್ಯಾಗಿಂಗ್‌ ವಿರೋಧಿ ತಡೆ ಜವಾಬ್ದಾರಿಯಾಗಿರುತ್ತದೆ.

ಆದರೆ, ವಿಪರ್ಯಾಸದ ಸಂಗತಿಯೆಂದರೆ ಸ್ವತಃ ರಾಷ್ಟ್ರೀಯ ರ‍್ಯಾಗಿಂಗ್‌ ವಿರೋಧಿ ತಡೆಯೇ ತನ್ನ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಯ ದೂರು ಸೇರಿದಂತೆ ಆತನ ಗುರ್ತಿಕೆಯ ದಾಖಲೆಗಳನ್ನು ಬಹಿರಂಗಪಡಿಸಿದೆ. ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು www.antiragging.in ನಲ್ಲಿ ಹಾಕಿದೆ.

ಇನ್ನು ರಾಷ್ಟ್ರೀಯ ರ‍್ಯಾಗಿಂಗ್‌ ವಿರೋಧಿ ತಡೆ ಮಾಡಿರುವ ಈ ಅಚಾತುರ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಎಫ್ಐ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಸ್.ಕನಗರಾಜ್ ಅವರು, ದೂರು ನೀಡಿದ ವಿದ್ಯಾರ್ಥಿಯ ಗುರ್ತಿಕೆಯನ್ನು ಬಹಿರಂಗ ಪಡಿಸಿರುವುದೇ ಆಗಿದ್ದಲ್ಲಿ, ಮುಂದಿನ ದಿನಗಳಲ್ಲಿ ಆ ವಿದ್ಯಾರ್ಥಿ ತನಿಖೆ ಸಹಕರಿಸದಿರಬಹುದು ಹಾಗೂ ಆ ವಿದ್ಯಾರ್ಥಿಗೆ ಸಮಸ್ಯೆಗಳುಂಟಾಗುವ ಸಾಧ್ಯಗಳಿರುತ್ತವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com