
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಗೆ ದೆಹಲಿ ನ್ಯಾಯಾಲಯ ಗುರುವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಹೊತ್ತಿದ್ದ ಅನ್ಮೋಲ್ ರತನ್ ಎಂಬಾತ ಬುಧವಾರವಷ್ಟೇ ವಸಂತ್ ಕುಂಜ್ ನಾರ್ತ್ ಪೊಲೀಸ್ ಠಾಣೆಗೆ ಬಂದು ಪೊಲೀಸರ ಬಳಿ ಶರಣಾಗಿದ್ದ.
ಜೆಎನ್ ಯುನಲ್ಲಿ ವ್ಯಾಸಾಂಗ ಮಾಡುತ್ತಿದ್ದ 29 ವರ್ಷದ ಮಹಿಳೆಯೊಂದಿಗೆ ಗೆಳೆತನ ಹೊಂದಿದ್ದ ಅನ್ಮೋಲ್, ಆಕೆಗೆ ಬೇಕಾಗಿದ್ದ ಸಿನಿಮಾವೊಂದನ್ನು ನೀಡುವ ನೆಪದಲ್ಲಿ ಆಕೆಯ ರೂಮಿಗೆ ಹೋಗಿದ್ದಾನೆ. ನಂತರ ಪ್ರಜ್ಞೆ ತಪ್ಪಿಸುವ ಪಾನೀಯವನ್ನು ನೀಡಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆಂಬ ಆರೋಪಗಳು ಕೇಳಿಬಂದಿತ್ತು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಅನ್ಮೋಲ್ ತಲೆ ಮರೆಸಿಕೊಂಡಿದ್ದ. ಅತ್ಯಾಚಾರ ಆರೋಪ ಹೊತ್ತ ನಂತರ ಅನ್ಮೋಲ್ ನನ್ನು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ನಿಂದ ಹೊರಹಾಕಲಾಗಿತ್ತು. ಅಲ್ಲದೆ, ಪೊಲೀಸರು ಅನ್ಮೋಲ್ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆಯೇ ಅನ್ಮೋಲ್ ನಿನ್ನೆ ಪೊಲೀಸರಿಗೆ ಶರಣಾಗಿದ್ದ.
Advertisement