
ಶ್ರೀನಗರ: ಹಿಂಸಾಚಾರ ಹಾಗೂ ಗಲಭೆ ನಿಯಂತ್ರಣಕ್ಕಾಗಿ ಕಾಶ್ಮೀರದಲ್ಲಿ ಭಾರತೀಯ ಸೇನೆ ಬಳಕೆ ಮಾಡುತ್ತಿರುವ ಪೆಲ್ಲೆಟ್ ಗನ್ ಗಳನ್ನು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಅಧಿಕಾರಿಗಳ ವರದಿ ಬಂದ ಕೂಡಲೇ ಪರ್ಯಾಯ ಮಾರ್ಗ ಆಲೋಚಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರ ಹಿಂಸಾಚಾರ ಹಿನ್ನಲೆಯಲ್ಲಿ ಶ್ರೀನಗರಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಉಭಯ ನಾಯಕರು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಚರ್ಚಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಮೆಹಬೂಬಾ ಅವರು ಭಾರತೀಯ ಸೇನೆ ಬಳಕೆ ಮಾಡುತ್ತಿರುವ ಪೆಲ್ಲೆಟ್ ಗನ್ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪೆಲ್ಲೆಟ್ಗನ್ ಪರ್ಯಾಯ ಮಾರ್ಗದ ಕುರಿತು ಆಲೋಚಿಸುವುದಾಗಿ ಮೆಹಬೂಬಾ ಅವರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ಬಳಕೆ ಕುರಿತಂತೆ ರಚಿಸಲಾಗಿರುವ ಸಮಿತಿ ಇನ್ನೆರಡು-ಮೂರು ದಿನಗಳಲ್ಲಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದ್ದು, ವರದಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗುಂಡಿನ ಗನ್ ಗಳಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿರುವುದರಿಂದ ಸುಮಾರು 40 ವರ್ಷಗಳಿಂದಲೂ ಕಾಶ್ಮೀರದಲ್ಲಿ ಯೋಧರು ಹಾಗೂ ಪೊಲೀಸರು ಪೆಲ್ಲೆಟ್ ಗನ್ ಬಳಕೆ ಮಾಡುತ್ತಿದ್ದಾರೆ. ಈ ಗನ್ ಗಳಿಂದ ಪ್ರಾಣಾಪಾಯವಿಲ್ಲದೇ ಹೋದರೂ, ಕಾಶ್ಮೀರದಲ್ಲಿ ಇವುಗಳ ಬಳಕೆಗೆ ವ್ಯಾಪಕ ವಿರೋಧವಿದೆ. ಪೆಲ್ಲೆಟ್ ಗನ್ ಗಳ ಹೊಡೆತದಿಂದ ಇಲ್ಲಿನ ಸಾಕಷ್ಟು ಮಂದಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವರು ಶಾಶ್ವತ ಅಂಧರಾಗಿದ್ದು, ಮತ್ತೆ ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ ಎಂದು ಹಲವು ಸಂಘ ಸಂಸ್ಥೆಗಳು ಆರೋಪಿಸಿವೆ.
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಹಿಂಸಾಚಾರದಲ್ಲೂ ಭಾರತೀಯ ಸೇನೆ ಇದೇ ಪೆಲ್ಲೆಟ್ಗನ್ ಗಳ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದೆ. ಆದರೆ ಈ ಪೆಲ್ಲೆಟ್ ಗನ್ ಗಳ ಹೊಡೆತದಿಂದಾಗಿ ಹಲವು ಅಂಧರಾಗಿದ್ದರೆ, ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Advertisement