"ನಿರ್ಭಯಾ" ಅತ್ಯಾಚಾರಿ ವಿನಯ್ ಶರ್ಮಾ ಆತ್ಯಹತ್ಯೆಗೆ ಯತ್ನ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಹತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ನಿರ್ಭಯಾ ಪ್ರಕರಣ (ಸಂಗ್ರಹ ಚಿತ್ರ)
ನಿರ್ಭಯಾ ಪ್ರಕರಣ (ಸಂಗ್ರಹ ಚಿತ್ರ)
Updated on

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಹತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ತಿಹಾರ್ ಜೈಲಿನ ಮೂಲಗಳ ಪ್ರಕಾರ ನಿನ್ನೆ ರಾತ್ರಿ ಕೆಲ ನಿಷೇಧಿತ ನೋವು ನಿವಾರಕಗಳನ್ನು ತೆಗೆದುಕೊಂಡಿದ್ದ ವಿನಯ್ ಶರ್ಮಾ ಬಳಿಕ ನೇಣಿಗೆ ಶರಣಾಗಲು ಪ್ರಯತ್ನಿಸಿದ್ದಾನೆ. ತನ್ನ ಬಳಿ ಇದ್ದ  ಟವಲ್ ಅನ್ನೇ ಹಗ್ಗವನ್ನಾಗಿ ಬಳಕೆ ಮಾಡಿರುವ ವಿನಯ್ ಅದರ ಮೂಲಕ ನೇಣು ಬಿಗಿದುಕೊಂಡಿದ್ದಾನೆ. ಘಟನೆ ಕುರಿತಂತೆ ವಿಷಯ ತಿಳಿಯುತ್ತಿದ್ದಂತೆಯೇ ತಿಹಾರ್ ಜೈಲಿನ ಭದ್ರತಾ  ಅಧಿಕಾರಿಗಳು ವಿನಯ್ ಶರ್ಮನನ್ನು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆಸ್ಪತ್ರೆ ಮೂಲಗಳ ಪ್ರಕಾರ ಪ್ರಸ್ತುತ ಆತನ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.  ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ  ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ಮೇಲೆ 2013ರಲ್ಲಿ ಸಹ ಖೈದಿಗಳು ದಾಳಿ ನಡೆಸಿದ್ದರು. ಈ ವೇಳೆ ಕೋರ್ಟ್ ಮೊರೆ ಹೋಗಿದ್ದ ವಿನಯ್, ತನಗೆ ಹೆಚ್ಚುವರಿ ಭದ್ರತೆ ನೀಡುವಂತೆ ಮನವಿ  ಮಾಡಿದ್ದ.

ಇನ್ನು ಇದೇ 2013ರಲ್ಲಿ ಇದೇ ಪ್ರಕರಣದ ಮತ್ತೋರ್ವ ಆರೋಪಿ ಬಸ್ ಚಾಲಕ ರಾಮ್ ಸಿಂಗ್ ಇದೇ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.

2012ರ ಡಿಸೆಂಬರ್ ನಲ್ಲಿ ತಡರಾತ್ರಿ ಮನೆಗೆ ಹೋಗುತ್ತಿದ್ದ "ನಿರ್ಭಯಾ"ಳನ್ನು ಚಲಿಸುತ್ತಿದ್ದ ಬಸ್ ನಲ್ಲಿ ಭೀಕರವಾಗಿ ಅತ್ಯಾಚಾರ ಮಾಡಲಾಗಿತ್ತು. ಅಲ್ಲದೆ ಚಲಿಸುತ್ತಿದ್ದ ಬಸ್ ನಿಂದಲೇ ಆಕೆಯನ್ನು  ರಸ್ತೆಗೆ ಬಿಸಾಡಲಾಗಿತ್ತು. ಸ್ಥಳೀಯರ ನೆರವಿನೊಂದಿಗೆ ಗಂಭೀರವಾಗಿ ಗಾಯಗೊಂಡಿದ್ದ ನಿರ್ಭಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ  ಸಾವನ್ನಪ್ಪಿದ್ದಳು. ಪ್ರಕರಣ ಸಂಬಂಧ ಓರ್ವ ಬಾಲಾಪರಾಧಿ ಸೇರಿದಂತೆ ಒಟ್ಟು ಆರು ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ಪೈಕಿ ಬಸ್ ರಾಮ್ ಸಿಂಗ್ ಈಗಾಗಲೇ ಆತ್ಮಹತ್ಯೆಗೆ  ಶರಣಾಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com