ಸ್ಕ್ರಾರ್ಪೀನ್ ಮಾಹಿತಿ ಸೋರಿಕೆ: ಪಾಕ್, ಚೀನಾಗೆ ವರದಾನ?

ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವಂತೆಯೇ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕಾ ಮಾಹಿತಿ ಸೋರಿಕೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಕಾರ್ಪೀನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪೀನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ನವದೆಹಲಿ: ಪಾಕಿಸ್ತಾನ ಪೋಷಿತ ಭಯೋತ್ಪಾದನೆ ಮತ್ತು ಚೀನಾದ ಗಡಿ ತಂಟೆ ಸೇರಿದಂತೆ ಇನ್ನಿತರೆ ವಿಚಾರಗಳಿಂದಾಗಿ ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ  ಮಾಡುತ್ತಿರುವಂತೆಯೇ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕಾ ಮಾಹಿತಿ ಸೋರಿಕೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ರಕ್ಷಣಾ ವಿಚಾರದಲ್ಲಿ ನೌಕಾಪಡೆಯ ಪಾತ್ರ ಪ್ರಮುಖವಾಗಿದ್ದು, ಯುದ್ಧ ಸಂದರ್ಭದಲ್ಲಿ ಶತ್ರುರಾಷ್ಟ್ರಗಳನ್ನು ಎದುರಿಸಲು ಭೂ ಸೇನೆ, ವಾಯುಪಡೆಯಷ್ಟೇ ನೌಕಾಪಡೆಯೂ ಮಹತ್ವದ  ಪಾತ್ರ ನಿರ್ವಹಿಸುತ್ತದೆ. ಸಾಮಾನ್ಯವಾಗಿ ನೌಕಾಪಡೆಗಳಿಗೆ ಸಬ್‌ಮೆರಿನ್‌ಗಳೇ ಬೆನ್ನೆಲುಬಾಗಿದ್ದು, ತಂತ್ರಜ್ಞಾನ ವಿಶೇಷತೆ ಅನುಸಾರವಾಗಿ ಸಬ್‌ಮೆರಿನ್‌ಗಳ ಸಾಮರ್ಥ್ಯವೂ  ನಿಗದಿಯಾಗಿರುತ್ತದೆ.

ಎದುರಾಳಿಗಳ ಕಣ್ತಪ್ತಿಸುವ ತಂತ್ರಗಾರಿಕೆ, ಅವುಗಳ ವೇಗ, ಶಸ್ತ್ರಾಸ್ತ್ರ ಸಾಮರ್ಥ್ಯ, ತಾಂತ್ರಿಕ ಸಾಮರ್ಥ್ಯದಂತಹ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವುದರಿಂದ ಅವುಗಳನ್ನು ಅರಿತು  ಪ್ರತಿದಾಳಿ ನಡೆಸಲು ಶತ್ರು ರಾಷ್ಟ್ರಗಳಿಗೆ ಉಪಯೋಗವಾಗುತ್ತದೆ. ಸದ್ಯ ಸೋರಿಕೆಯಾಗಿರುವ ಮಾಹಿತಿ ಭಾರತೀಯ ಸಬ್‌ಮೆರಿನ್‌ಗಳಿಗೆ ಸಂಬಂಧಿಸಿದ್ದೇ ಆಗಿದ್ದಲ್ಲಿ ಭಾರತದ ಸಾಂಪ್ರದಾಯಿಕ  ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನಕ್ಕೆ ಅದು ವರದಾನವಾಗಲಿದೆ.

ಭಾರತದ ನೌಕಾಪಡೆಯ ಸಾಮರ್ಥ್ಯವನ್ನರಿತು ಈ ದೇಶಗಳು ತಮ್ಮ ಪ್ರತಿದಾಳಿ ಯೋಜನೆ ಮಾಡಿಕೊಳ್ಳಬಹುದು. ಹೀಗಾಗಿ ಸ್ಕ್ರಾರ್ಪೀನ್ ಮಾಹಿತಿ ಸೋರಿಕೆಯನ್ನು ಕೇಂದ್ರ ಸರ್ಕಾರ  ಗಂಭೀರವಾಗಿ ಪರಿಗಣಿಸಬೇಕಿದ್ದು, ತುರ್ತು ಮತ್ತು ಕೂಲಂಕುಷ ತನಿಖೆ ಮೂಲಕ ಯಾವೆಲ್ಲಾ ಮಾಹಿತಿಗಳು ಸೋರಿಕೆಯಾಗಿವೆ ಎಂಬುದನ್ನು ಮೊದಲು ಅರಿಯಬೇಕಿದೆ. ಅಂತೆಯೇ  ಸೋರಿಕೆಯಾದ ಮಾಹಿತಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಜವಾಬ್ದಾರಿ ಕೂಡ ಕೇಂದ್ರ ಸರ್ಕಾರದ ಮೇಲಿದ್ದು, ಜಲಾಂತರ್ಗಾಮಿಯ ತಾಂತ್ರಿಕ ಸಾಮರ್ಥ್ಯದ ಮಾಹಿತಿ ಸೋರಿಕೆಯಾಗಿದ್ದರೆ  ಅವುಗಳನ್ನು ಬದಲಿಸುವ ಅಥವಾ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ.

ಆದರೆ ಇದು ಅಷ್ಟು ಸುಲಭದ ಕಾರ್ಯವಲ್ಲ. ಏಕೆಂದರೆ ಸಾಮಾನ್ಯವಾಗಿ ಯಾವುದೇ ಜಲಾಂತರ್ಗಾಮಿ ನೌಕೆಯ ವಿನ್ಯಾಸ, ತಾಂತ್ರಿಕ ಸಾಮರ್ಥ್ಯಗಳನ್ನು ಮೊದಲೇ ಯೋಜಿಸಿ ಅದು  ಯೋಗ್ಯವೆನಿಸಿದರೆ ಮಾತ್ರ ಅವುಗಳ ಯೋಜನೆಗೆ ಕೈ ಹಾಕಲಾಗುತ್ತದೆ. ಪ್ರಸ್ತುತ ಸ್ಕ್ರಾರ್ಪೀನ್ ಜಲಾಂತರ್ಗಾಮಿ ನೌಕೆ ನಿರ್ಮಾಣ ಹಂತದಲ್ಲಿದ್ದು, ಈ ಹಂತದಲ್ಲಿ ಯಾವುದೇ ಬದಲಾವಣೆಗೆ  ಮುಂದಾದರೆ ನೌಕೆಯ ಸೇನಾ ಸೇರ್ಪಡೆ ವಿಳಂಬವಾಗುತ್ತದೆ. ಇದಕ್ಕಿಂತಲೂ ಮತ್ತೊಂದು ಪ್ರಮುಖ ಅಂಶವೆಂದರೆ ಈಗಾಗಲೇ ಯೋಜಿಸಿರುವ ವಿನ್ಯಾಸ ಮತ್ತು ತಾಂತ್ರಿಕತೆಯನ್ನು ಕೈಬಿಟ್ಟು  ಬೇರೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅದರ ವೆಚ್ಚ ಕೂಡ ದುಬಾರಿಯಾಗಬಲ್ಲದು.

ದುಬಾರಿ ಮತ್ತು ವಿಳಂಬ ಎನ್ನುವುದಕ್ಕಿಂತ ಮುಖ್ಯವಾಗಿ ಇದು ಸುರಕ್ಷತೆಯ ವಿಚಾರವಾದ್ದರಿಂದ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮಾಹಿತಿ ಸೋರಿಕೆಯನ್ನು ಲಘುವಾಗಿ ಪರಿಗಣಿಸಲೇಬಾರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com