ಟರ್ಕಿಯಲ್ಲಿ ಮತ್ತೆ ಉಗ್ರರ ಅಟ್ಟಹಾಸ; ಕಾರ್ ಬಾಂಬ್ ದಾಳಿಯಲ್ಲಿ 9 ಮಂದಿ ಸಾವು

ಗಲಭೆ ಪೀಡಿತ ಟರ್ಕಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಪೊಲೀಸ್ ಪ್ರಧಾನ ಕಚೇರಿ ಮೇಲೆ ಕಾರ್ ಬಾಂಬ್ ದಾಳಿ ನಡೆಸಿ ಕನಿಷ್ಠ 9 ಮಂದಿಯ ಸಾವಿಗೆ ಕಾರಣರಾಗಿದ್ದಾರೆ.
ಟರ್ಕಿಯಲ್ಲಿ ಕಾರ್ ಬಾಂಬ್ ಸ್ಫೋಟ (ಟ್ವಿಟರ್ ಚಿತ್ರ)
ಟರ್ಕಿಯಲ್ಲಿ ಕಾರ್ ಬಾಂಬ್ ಸ್ಫೋಟ (ಟ್ವಿಟರ್ ಚಿತ್ರ)

ಇಸ್ತಾನ್ ಬುಲ್: ಗಲಭೆ ಪೀಡಿತ ಟರ್ಕಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಪೊಲೀಸ್ ಪ್ರಧಾನ ಕಚೇರಿ ಮೇಲೆ ಕಾರ್ ಬಾಂಬ್ ದಾಳಿ ನಡೆಸಿ ಕನಿಷ್ಠ 9 ಮಂದಿಯ ಸಾವಿಗೆ  ಕಾರಣರಾಗಿದ್ದಾರೆ.

ಆಗ್ನೇಯ ಟರ್ಕಿಯ ಸಿರಿಯಾ-ಟರ್ಕಿ ಗಡಿಯಲ್ಲಿರುವ ಸಿಜ್ರೆ ನಗರದಲ್ಲಿ ದಾಳಿ ನಡೆದಿದ್ದು, ಸಿಜ್ರೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಉಗ್ರರು ಕಾರ್ ಬಾಂಬ್ ದಾಳಿ  ನಡೆಸಿದ್ದಾರೆ. ಘಟನೆಯಲ್ಲಿ ಕನಿಷ್ಟ 9 ಮಂದಿ ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಟರ್ಕಿ  ಮಾಧ್ಯಮಗಳಲ್ಲಿ ಕಾರ್ ಬಾಂಬ್ ಸ್ಫೋಟದ ದೃಶ್ಯಾವಳಿಗಳು ಪ್ರಸಾರವಾಗಿದ್ದು, ಬಾಂಬ್ ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಹತ್ತಾರು ಮನೆಗಳು ಜಖಂಗೊಂಡಿವೆ.

ಸೇನಾಸ್ಪತ್ರೆ ಮೂಲಗಳ ಪ್ರಕಾರ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿ, 64 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಜವಾಬ್ಗಾರಿಯನ್ನು ಈ ವರೆಗೂ ಯಾವುದೇ ಉಗ್ರ  ಸಂಘಟನೆ ಹೊತ್ತಿಲ್ಲವಾದರೂ, ಕುರ್ದಿಶ್ ನ ಸಾಂಪ್ರದಾಯಿಕ ಉಗ್ರಗಾಮಿ ಸಂಘಟನೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ಜುಲೈ ತಿಂಗಳನಿಂದ ಈ ಪ್ರಾಂತ್ಯದಲ್ಲಿ ಸ್ಥಳೀಯ ಉಗ್ರಗಾಮಿ ಸಂಘಟನೆಗಳ ಹಾವಳಿ ಜೋರಾಗಿದ್ದು, ಸೈನಿಕರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಸಾಮಾನ್ಯ  ಎನ್ನುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com