ಒಡಿಶಾದಲ್ಲಿ ಶವ ಸಾಗಾಟಕ್ಕಾಗಿ ಹೆಣದ ಸೊಂಟ ಮುರಿದ ಆಸ್ಪತ್ರೆ ಸಿಬ್ಬಂದಿ!

ಬುಡಕಟ್ಟು ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವ ಹೊತ್ತು 10 ಕಿ.ಮೀ ಸಾಗಿದ ಘಟನೆಯ ಬೆನ್ನಲ್ಲೇ ಒಡಿಶಾದಲ್ಲಿ ಅಂತಹುದೇ ಆಘಾತಕಾರಿ,...
ಶವ ಸಾಗಿಸುತ್ತಿರುವ ಸಿಬ್ಬಂದಿ
ಶವ ಸಾಗಿಸುತ್ತಿರುವ ಸಿಬ್ಬಂದಿ
ಭುವನೇಶ್ವರ: ಬುಡಕಟ್ಟು ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವ ಹೊತ್ತು 10 ಕಿ.ಮೀ ಸಾಗಿದ ಘಟನೆಯ ಬೆನ್ನಲ್ಲೇ ಒಡಿಶಾದಲ್ಲಿ ಅಂತಹುದೇ ಆಘಾತಕಾರಿ, ಹೃದಯ ಕಲಕುವ ಮತ್ತೊಂದು ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೊ ರೈಲ್ವೆ ನಿಲ್ದಾಣಕ್ಕೆ ಸಮೀಪ ವಾಸವಿದ್ದ 80 ವರ್ಷದ ಸಲಾಮಣಿ ಬೆಹೆರಾ ಎಂಬ ಮಹಿಳೆ ಬುಧವಾರ ಬೆಳಗ್ಗೆ ಗೂಡ್ಸ್ ರೈಲು ಹರಿದು ಸಾವನ್ನಪ್ಪಿದ್ದರು. ಬಳಿಕ ಅವರನ್ನು ಸೊರೊ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್​ಸಿ)ಕ್ಕೆ ಸಾಗಿಸಲಾಗಿತ್ತು. ಅವರ ಸಂಬಂಧಿಗಳಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿ, ಅವರು ಆಸ್ಪತ್ರೆಗೆ ಆಗಮಿಸುವ ವೇಳೆ 12 ಗಂಟೆಗಳು ಕಳೆದಿದ್ದವು. ಅವರು ಬಾಲಸೋರ್ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲು ಆಂಬುಲೆನ್ಸ್ ಇಲ್ಲದೇ ಪರದಾಡಬೇಕಾಗಿ ಬಂದಿದೆ. ಕಡೆಗೂ ಯಾರಿಂದಲೂ ಸಹಕಾರ ಸಿಗದೇ, ಆಂಬುಲೆನ್ಸ್ ಇಲ್ಲದೇ ವೃದ್ಧೆಯ ದೇಹವನ್ನು ಬಿದಿರ ಸಲಾಕೆಯೊಂದಕ್ಕೆ ಕಟ್ಟಿಕೊಂಡು ಹೊತ್ತೊಯ್ದಿದ್ದಾರೆ.
ಬಡವರಿಗಾಗಿ ಅಂಬುಲೆನ್ಸ್‌ ಸೌಕರ್ಯವೇ ಇಲ್ಲದ ಈ ಆಸ್ಪತ್ರೆಯಲ್ಲಿ ಬಡವರು ಹಾಗೂ ನಿರ್ಗತಿಕ ಹೆಣಗಳ ಸೊಂಟ ಮುರಿದು ಅದನ್ನು ಒಂಟಿ ಬಿದಿರಿನ ಕೋಲಿಗೆ ಕಟ್ಟಿ ಒಯ್ಯಲು ಅನುಕೂಲವಾಗುವಂತೆ ಅದರ ಗಾತ್ರವನ್ನು ಕುಗ್ಗಿಸುವ ಸುಲಭೋಪಾಯವೊಂದನ್ನು ಇಲ್ಲಿನ ಶವಾಗಾರದ ಸಿಬಂದಿ ಅನುಸರಿಸುತ್ತಿದ್ದಾರೆ. 
ಮೃತ ಮಹಿಳೆಯ ಶವವನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿ, ಅದಕ್ಕೊಂದು ಬಿದಿರ ಸಲಾಕೆ ಕಟ್ಟಿ ಇಬ್ಬರು ಸೇರಿ ಹೊತ್ತೊಯ್ದ ಘಟನೆ ನಡೆದಿದೆ. ಈ ಘಟನೆ ನಡೆದಿರುವುದೂ ಆಂಬುಲೆನ್ಸ್ ಸೇವೆ ಇಲ್ಲ ಎನ್ನುವ ಕಾರಣಕ್ಕಾಗಿ ಎನ್ನುವುದು ಅತಿ ಬೇಸರದ ಸಂಗತಿಯಾಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೇ ಉದ್ಘಾಟಿಸಿದ ರಾಜ್ಯ ಸರ್ಕಾರದ ‘ಮಹಾಪ್ರಯಾಣ’ ಹೆಸರಿನ ಉಚಿತ ಆಂಬುಲೆನ್ಸ್ ಯೋಜನೆ ಸೌಲಭ್ಯ 30 ಜಿಲ್ಲೆಗಳಲ್ಲಿ ಇದ್ದರೂ ಮತ್ತೆ ಮತ್ತೆ ಇಂಥ ಘಟನೆ ನಡೆಯುತ್ತಿರುವುದು ಪ್ರಶ್ನಾರ್ಹವಾಗಿದೆ ಎಂದು ಪ್ರಜ್ಞಾವಂತರು ಆಡಿಕೊಳ್ಳುವಂತಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸ್ ಅಧಿಕಾರಿ, ಸಹಾಯಕ ಸಬ್ ಇನ್ಸ್​ಪೆಕ್ಟರ್ ಪ್ರತಾಪ್ ರುದ್ರ ಮಿಶ್ರಾ, ಆಟೋವೊಂದನ್ನು ಕಳುಹಿಸಿಕೊಡಲು ನಿರ್ಧರಿಸಿ, ಆಟೋದವರನ್ನು ಕೇಳಿದರೆ ಅದಕ್ಕೆ 3,500 ರೂ. ನೀಡುವಂತೆ ಕೇಳಿದರು. ಆದರೆ ನನಗೆ 1,000 ರೂ. ನೀಡಲಷ್ಟೇ ಅವಕಾಶವಿತ್ತು. ಹೀಗಾಗಿ ಅದು ಸಾಧ್ಯವಾಗಲಿಲ್ಲ. ಬಳಿಕ ಅನಿವಾರ್ಯವಾಗಿ ಗ್ರೇಡ್ 4 ಕೆಲಸಗಾರರಲ್ಲಿ ಮನವಿ ಮಾಡಿಕೊಂಡು ಮೃತ ದೇಹವನ್ನು 2 ಕಿಲೋ ಮೀಟರ್ ದೂರದ ರೈಲ್ವೆ ನಿಲ್ದಾಣಕ್ಕೆ ಸಾಗಿಸುವ ಕೆಲಸ ಮಾಡಬೇಕಾಯಿತು ಎಂದಿದ್ದಾರೆ. ರೈಲ್ವೆ ನಿಲ್ದಾಣದಿಂದ ಬಾಲಸೋರ್​ಗೆ ಶವ ಸಾಗಿಸಿ ಅಲ್ಲಿ ಅವರ ಸಂಬಂಧಿಕರೆಲ್ಲರೂ ಸೇರಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಇದೀಗ ಮಾನವ ಹಕ್ಕು ಆಯೋಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com