
ಲಾಹೋರ್: 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ಮಾಡಿದ್ದ ಲಷ್ಕರ್-ಇ-ಝಾಂಗ್ವಿ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಪಾಕಿಸ್ತಾನ ಪೊಲೀಸರು ಹತ್ಯೆ ಮಾಡಿರುವುದಾಗಿ ಭಾನುವಾರ ತಿಳಿದುಬಂದಿದೆ.
ಲಾಹೋರ್ ನ ಮನವನ್ ಪ್ರದೇಶದಲ್ಲಿದ್ದ ಸಿಐಡಿ ಕಚೇರಿ ಮೇಲೆ 7 ಜನರ ಉಗ್ರರ ಗುಂಪೊಂದು ದಾಳಿ ಮಾಡಿದೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ದಾಳಿ ನಡೆಸಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಆದರೆ, ಸ್ಥಳದಲ್ಲಿ ಬೆಳಕಿನ ಕೊರತೆಯಿದ್ದರಿಂದ ಉಳಿದ ಮೂವರು ಉಗ್ರರು ತಪ್ಪಿಸಿಕೊಂಡಿದ್ದಾರೆಂದು ಪಂಜಾಬ್ ಸಿಐಡಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ತೀರಾ ಕತ್ತಲೆಯಿದ್ದರಿಂದ ಉಗ್ರರನ್ನು ಹುಡುಕಲು ಸಾಧ್ಯವಾಗಲಿಲ್ಲ. ಇದನ್ನೇ ಬಳಸಿಕೊಂಡ ಉಗ್ರರು ತಲೆಮರೆಸಿಕೊಂಡಿದ್ದಾರೆ. ತಪ್ಪಿಸಿಕೊಂಡಿರುವ ಉಗ್ರರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಪರಾಧ ತನಿಖಾ ವಿಭಾಗದ ವಕ್ತಾರ ಹೇಳಿದ್ದಾರೆ.
ಹತ್ಯೆಯಾದ ಉಗ್ರರನ್ನು ಜುಬೇರ್ ಅಲಿಯಾಸ್ ನಾಯಕ್ ಮೊಹಮ್ಮದ್, ಅಬ್ದುಲ್ ವಾಹಬ್, ಅದ್ನಾನ್ ಅರ್ಷದ್ ಮತ್ತು ಅಟ್ಟಿಕ್ಯುರ್ ರೆಹ್ಮಾನ್ ಎಂದು ಗುರ್ತಿಸಲಾಗಿದೆ. ಹತ್ಯೆಯಾಗಿರುವ ನಾಲ್ವರೂ ಉಗ್ರರು 2009ರಲ್ಲಿ ಲಾಹೋರ್ ಗೆ ಬಂದಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ಮಾಡಿದ್ದರು ಎಂದು ಸಿಟಿಡಿ ವಕ್ತಾರ ಹೇಳಿದ್ದಾರೆ.
ಉಗ್ರರನ್ನು ಸದೆಬಡಿದ ಬಳಿಕ ಅವರ ಬಳಿದಿದ್ದ ಭಾರೀ ಪ್ರಮಾಣದ ಸ್ಫೋಟಕ ಸಾಮಾಗ್ರಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಬಸ್ಸೊಂದರಲ್ಲಿ ಸ್ಟೇಡಿಯಂನತ್ತ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಷ್ಕರ್-ಇ-ಝಾಂಗ್ವಿ ಉಗ್ರ ಸಂಘಟನೆಗೆ ಸೇರಿದ ಉಗ್ರರ ಗುಂಪೊಂದು ಶಸ್ತ್ರಸಜ್ಜಿತರಾಗಿ ಬಂದು ಆಟಗಾರರ ಮೇಲೆ ಗುಂಡಿನ ದಾಳಿಯನ್ನು ನಡೆಸಿತ್ತು. ಈ ವೇಳೆ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಮಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ಅಜಂತಾ ಮೆಂಡಿಸ್, ತಿಲನ್ ಸಮರವೀರ ಮತ್ತು ತರಂಗ ಪರನವಿತನ ಗಾಯಗೊಂಡಿದ್ದರು. ಇದಲ್ಲದೆ, ದಾಳಿ ವೇಳೆ ಕ್ರಿಕೆಟ್ ತಂಡಕ್ಕೆ ಭದ್ರತೆ ನೀಡುತ್ತಿದ್ದ 6 ಪಾಕಿಸ್ತಾನ ಪೊಲೀಸರು ಹಾಗೂ ಹಲವು ನಾಗರೀಕರು ಸಾವನ್ನಪ್ಪಿದ್ದರು.
Advertisement