ಸತತ 52 ದಿನಗಳ ಬಳಿಕ ಕಾಶ್ಮೀರದ ಹಲವೆಡೆ ಕರ್ಫ್ಯೂ ಹಿಂತೆಗೆತ
ಶ್ರೀನಗರ: ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಮತ್ತು ನಿಷೇಧಾಜ್ಞೆ ಹೇರಿಕೆ ಸತತ 52ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ರಾಜಧಾನಿ ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವೆಡೆ ಕರ್ಫ್ಯೂ ತೆರವುಗೊಳಿಸಲಾಗಿದೆ.
ಪುಲ್ವಾಮದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಈ ಹಿನ್ನಲೆಯಲ್ಲಿ ಅಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಪುಲ್ವಾಮಾ ಹಾಗೂ ಶ್ರೀನಗರದ ಹಲವೆಡೆ 144 ಸೆಕ್ಷನ್ ಮುಂದುವರೆಸಲಾಗಿದ್ದು, 10 ಮಂದಿ ಒಟ್ಟಿಗೆ ಸೇರುವುದನ್ನು ನಿಷೇಧಿಸಲಾಗಿದೆ. ಹಿಜ್ಬುಲ್ ಸಂಘಟನೆ ಕಮಾಂಡರ್ ಉಗ್ರ ಬುರ್ಹಾನ್ ವಾನಿ ಎನ್ ಕೌಂಟರ್ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಈ ವರೆಗೂ 70 ಮಂದಿ ಸಾವಿಗೀಡಾಗಿ 11 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಳೆದ ವಾರವಷ್ಟೇ ಶ್ರೀನಗರ ಸೇರಿದಂತೆ ಕಾಶ್ಮೀರದ ಬಟಮಲೂ, ಮೈಸುಮಾ ಮತ್ತು ಕ್ರಾಲ್ಕುಡ್ ಪಟ್ಟಣಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿತ್ತು. ಈ ಮೂರು ಪಟ್ಟಣಗಳಲ್ಲಿ ಪರಿಸ್ಥಿತಿ ಕೊಂಚ ಶಾಂತವಾಗಿರುವ ಹಿನ್ನಲೆಯಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದೀಗ ಪುಲ್ವಾಮವನ್ನು ಹೊರತು ಪಡಿಸಿ ಕಾಶ್ಮೀರದ ವಿವಿಧ ನಗರಗಳಲ್ಲಿ ಖಾಸಗಿ ಬಸ್, ಆಟೋ ರಿಕ್ಷಾ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶುಕ್ರವಾರ ಹಾಗೂ ಶನಿವಾರ ಪರಿಸ್ಥಿತಿ ಶಾಂತವಾಗಿರುವ ಹಿನ್ನಲೆಯಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ