
ಪಣಜಿ: ಗೋವಾ ರಾಜ್ಯದ ಆರ್ ಎಸ್ ಎಸ್ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿರುವುದನ್ನು ಖಂಡಿಸಿ, ಗೋವಾದ ಸುಮಾರು 400 ಕ್ಕೂ ಹೆಚ್ಚು ಸ್ವಯಂ ಸೇವಕರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿದ ಬಳಿಕ ಪಣಜಿಯಲ್ಲಿ ನಡೆದ ಸತತ 6 ಗಂಟೆಗಳ ಚರ್ಚೆ ನಂತರ ಜಿಲ್ಲಾ, ಉಪಜಿಲ್ಲಾ ಶಾಖಾ ಪ್ರಮುಖರು ಸೇರಿದಂತೆ ಒಟ್ಟು 400 ಕ್ಕೂ ಹೆಚ್ಚು ಸ್ವಯಂ ಸೇವಕರು ಆರ್ ಎಸ್ ಎಸ್ ನಿಂದ ಹೊರನಡೆಯುವ ತೀರ್ಮಾನ ಕೈಗೊಂಡಿದ್ದಾರೆ. ವೆಲಿಂಗ್ಕರ್ ಅವರನ್ನು ವಜಾಗೊಳಿಸಿರುವುದನ್ನು ಖಂಡಿಸಿರುವ ಆರ್ ಎಸ್ ಎಸ್ ನ ಪದಾಧಿಕಾರಿಗಳು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಆರ್ ಎಸ್ ಎಸ್, ಬಿಜೆಪಿಯ ಉನ್ನತ ಮಟ್ಟದ ನಾಯಕರು ವೆಲಿಂಗ್ಕರ್ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ವೆಲಿಂಗ್ಕರ್ ಅವರನ್ನು ಪುನಃ ನೇಮಕ ಮಾಡುವವರೆಗೂ ಸಾಮೂಹಿಕ ರಾಜೀನಾಮೆ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯ ಬಳಿಕ ಮಾತನಾಡಿರುವ ಆರ್ ಎಸ್ ಎಸ್ ನ ಪದಾಧಿಕಾರಿಗಳಾಗಿರುವ ರಾಮದಾಸ್ ಸರಫ್, ಎಲ್ಲಾ ಜಿಲ್ಲಾ ಕೇಂದ್ರಗಳ ವಿಭಾಗದ ಮುಖ್ಯಸ್ಥರು ಸುಭಾಷ್ ವೆಲಿಂಗ್ಕರ್ ಅವರನ್ನು ಪುನಃ ನೇಮಕ ಮಾಡುವವರೆಗೆ ರಾಜೀನಾಮೆ ನಿರ್ಧಾರದಿಂದ ಹಿಂದೆಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ವೆಲಿಂಗ್ಕರ್ ಅವರು ಮುನ್ನಡೆಸುವ ಭಾರತೀಯ ಭಾಷಾ ಸುರಕ್ಷಾ ಮಂಚ್ (ಬಿಬಿಎಸ್ ಎಂ), ಗೋವಾ ಪ್ರಾಥಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗಳಾದ ಕೊಂಕಣಿ ಮತ್ತು ಮರಾಠಿಯನ್ನು ಶೈಕ್ಷಣಿಕ ಮಾಧ್ಯಮವನ್ನಾಗಿಸಬೇಕು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಗೋವಾದ ಬಿಜೆಪಿ ಸರ್ಕಾರದ ವಿರುದ್ಧದ ನಡೆಯಿಂದ ಅಸಮಾಧಾನಗೊಂಡ ರಾಷ್ಟ್ರೀಯ ಸವಯಂಸೇವಕ ಸಂಘ (ಆರ್ ಎಸ್ ಎಸ್), ಬುಧವಾರ ಸಂಘಟನೆಯ ಗೋವಾ ಅಧ್ಯಕ್ಷ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿತ್ತು.
Advertisement