ನೇತಾಜಿ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು ಎಂದು ದಾಖಲೆಗಳು ಹೇಳುತ್ತವೆ: ಮೊಮ್ಮಗ ಆಶಿಶ್ ರೇ

ಸುಭಾಷ್ ಚಂದ್ರ ಬೋಸ್ ಅವರು 1945, ಆಗಸ್ಟ್ 18ರಂದು ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತ್ತಾ: ಸುಭಾಷ್ ಚಂದ್ರ ಬೋಸ್ ಅವರು 1945, ಆಗಸ್ಟ್ 18ರಂದು ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು ಎಂಬುದಕ್ಕೆ ತಮ್ಮ ಬಳಿ ಅಲ್ಲಗಳೆಯಲಾಗದ ಸಾಕ್ಷಿಗಳಿವೆ ಎಂದು ಬೋಸ್ ಅವರ ಸೋದರ ಮೊಮ್ಮಗ ಆಶಿಶ್ ರೇ ಪ್ರತಿಪಾದಿಸಿದ್ದಾರೆ.
ಅಲ್ಲಿನ ರೆಂಕೊಜಿ ದೇವಸ್ಥಾನದಲ್ಲಿ ಸಿಕ್ಕಿರುವ ಬೂದಿಯನ್ನು ಭಾರತಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ 1945ರಲ್ಲಿ ತೀರಿಕೊಂಡರು ಎಂಬುದನ್ನು ಮೂರು ಮುಖ್ಯ ವರದಿಗಳು ಸ್ಪಷ್ಟವಾಗಿ ತಿಳಿಸುತ್ತವೆ, ಅವರಿಗೆ ಸೋವಿಯತ್ ಒಕ್ಕೂಟಕ್ಕೆ ಸೇರಲು ಅವಕಾಶವನ್ನು ನೀಡಲಿಲ್ಲ ಎಂಬುದನ್ನು ಕೂಡ ವರದಿ ತಿಳಿಸುತ್ತದೆ.
ಜಪಾನ್ ಸರ್ಕಾರದ ಎರಡು ವರದಿಗಳು ಅವರು ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ಮತ್ತು ರಷ್ಯಾ ಸರ್ಕಾರದ ದಾಖಲೆಗಳು ನೇತಾಜಿಯವರಿಗೆ ಸೋವಿಯತ್ ಒಕ್ಕೂಟಕ್ಕೆ 1945ರಲ್ಲಿ ಅಥವಾ ನಂತರ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬುದನ್ನು ಹೇಳುತ್ತದೆ.ಅವರನ್ನು ಯುಎಸ್ಎಸ್ಆರ್ ನಲ್ಲಿ ಎಂದಿಗೂ ಖೈದಿಯಾಗಿ ಬಂಧಿಸಿರಲಿಲ್ಲ ಎಂದು ಆಶಿಶ್ ರೇ ಹೇಳುತ್ತಾರೆ.
ಕಮ್ಯೂನಿಸಂನ್ನು ಬಲವಾಗಿ ನಂಬಿದ್ದ ಬೋಸ್, ಕಮ್ಯೂನಿಸ್ಟ್ ರಾಷ್ಟ್ರವಾದ ರಷ್ಯಾಕ್ಕೆ ಹೋಗಲು ಇಚ್ಚಿಸಿರಬಹುದು. ಏಕೆಂದರೆ ಅವರಿಗೆ ಭಾರತವನ್ನು ಬ್ರಿಟಿಷರಿಂದ ಸ್ವಾತಂತ್ರ್ಯಮುಕ್ತಗೊಳಿಸಲು ಅಲ್ಲಿನ ಸರ್ಕಾರ ಮತ್ತು ಜನರಿಂದ ಬೆಂಬಲ ಸಿಗಬಹುದು ಎಂಬ ನಂಬಿಕೆ ಅವರಲ್ಲಿ ಇದ್ದಿರಬಹುದು. ಆದರೆ ಜಪಾನ್ ಶರಣಾದ್ದರಿಂದ ತನ್ನನ್ನು ರಕ್ಷಿಸಲಿಕ್ಕಿಲ್ಲ ಎಂಬುದು ಅವರಿಗೆ ತಿಳಿದಿರಬಹುದು. ಅವರಿಗೆ ಸೋವಿಯತ್ ಒಕ್ಕೂಟಕ್ಕೆ ಪ್ರವೇಶಿಸಲು ಅವಕಾಶ ಇಲ್ಲದಿದ್ದರೂ ಕೂಡ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಸೋವಿಯತ್ ಅಧಿಕಾರಿಗಳ ಮನವೊಲಿಸುವ ಅವಕಾಶಕ್ಕಾಗಿ ಅವರು ಕಾಯುತ್ತಿದ್ದಿರಬಹುದು ಎಂದು ರೇ ಹೇಳುತ್ತಾರೆ.
ವಿಷಯದ ಕುರಿತು ವ್ಯತಿರಿಕ್ತ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ನೇತಾಜಿ ಜೊತೆಗಿನ ಭಾರತೀಯರ ಭಾವನಾತ್ಮಕ ಸಂಬಂಧ ತಮಗೆ ಅರ್ಥವಾಗುತ್ತದೆಯಾದರೂ ಸತ್ಯದ ಪರ ಹೋರಾಡುವ ಅಗತ್ಯವಿದೆ ಎಂದರು.
ಅವರು ವಿಮಾನ ಅಪಘಾತದಲ್ಲಿ ನಿಧನರಾಗಿದ್ದು ಎಂದು ಎಷ್ಟೊಂದು ಸಾಕ್ಷಿಗಳಿದ್ದರೂ ಕೂಡ ನಾವು ಅದನ್ನು ಎಷ್ಟು ಸಮಯ ನಿರಾಕರಿಸುತ್ತಾ ಬರಬಹುದು ಎಂದು ಆಶಿಶ್ ರೇ ಕೇಳುತ್ತಾರೆ.
ರೆಂಕಿಜಿ ದೇವಸ್ಥಾನದಲ್ಲಿರುವ ಬೂದಿಯ ಡಿಎನ್ಎ ಪರೀಕ್ಷೆ ನಡೆಸಿ ಬೂದಿಯನ್ನು ಭಾರತಕ್ಕೆ ತರಬೇಕು ಎಂದು ರೇ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com