ನೋಟು ನಿಷೇಧದಿಂದ ಭ್ರಷ್ಟಾಚಾರ ನಿಲ್ಲೋದಾದರೆ, ನಾನು 'ಮೋದಿ ಮೋದಿ' ಜಪ ಮಾಡಲು ಸಿದ್ಧ: ಕೇಜ್ರಿವಾಲ್

ದುಬಾರಿ ನೋಟು ನಿಷೇಧದಿಂದ ಭ್ರಷ್ಟಾಚಾರ ದೇಶ ಬಿಟ್ಟು ತೊಲಗಿದರೆ 'ಮೋದಿ ಮೋದಿ' ಎಂದು ಜಪ ಮಾಡಲು ನಾನು ಸಿದ್ಧನಿದ್ದೇನೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ನವದೆಹಲಿ: ದುಬಾರಿ ನೋಟು ನಿಷೇಧದಿಂದ ಭ್ರಷ್ಟಾಚಾರ ದೇಶ ಬಿಟ್ಟು ತೊಲಗಿದರೆ 'ಮೋದಿ ಮೋದಿ' ಎಂದು ಜಪ ಮಾಡಲು ನಾನು ಸಿದ್ಧನಿದ್ದೇನೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಬವನಾದಲ್ಲಿ ನಡೆದ ವ್ಯಾಪಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ದಿನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಕಷ್ಟು ಬಾರಿ ತಮ್ಮ ಬಟ್ಟೆಗಳನ್ನು ಬದಲಿಸುತ್ತಿರುತ್ತಾರೆ, ಆದರೆ, ನೋಟು ನಿಷೇಧ ಕುರಿತು ಜನರಿಗೆ ಮಾತ್ರ ತ್ಯಾಗದ ಬಗ್ಗೆ ಬೋಧನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿರುವುದರಿಂದ ಸಾಕಷ್ಟು ಕಾರ್ಮಿಕರು, ರೈತರು ಹಾಗೂ ವ್ಯಾಪಾರಿಗಳು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಕೆಲವರು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಮಾತ್ರ ಬಟ್ಟೆ ಬದಲಿಸುವುದರಲ್ಲಿ ಕಾರ್ಯನಿರತರಾಗಿದ್ದಾರೆ. ಮೋದಿಯವರೇ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೂ ಮುನ್ನ, ಆ ಪ್ರಯೋಗವನ್ನು ಮೊದಲು ನಿಮ್ಮ ಮೇಲೆ ಮಾಡಿಕೊಳ್ಳಿ.

ನನಗೂ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡುವೆ ಸಾಕಷ್ಟು ವಿಚಾರಗಳಲ್ಲಿ, ಸಾಕಷ್ಟು ವಿಭಿನ್ನತೆಗಳಿವೆ. ಆದರೆ, ಸ್ವಚ್ಛ ಭಾರತ ಅಭಿಯಾನ, ಯೋಗ ದಿನದಂತಹ ಉತ್ತಮ ಕೆಲಸಗಳನ್ನು ಮಾಡಿದರೆ, ನಾವೂ ಕೂಡ ಮೋದಿಯವರ ಜೊತೆಗೆ ಕೈಜೋಡಿಸುತ್ತೇವೆ. ನೋಟು ನಿಷೇಧದಿಂದ ಭ್ರಷ್ಟಾಚಾರ ಹಾಗೂ ಕಪ್ಪುಹಣ ದೇಶಬಿಟ್ಟು ತೊಲಗಿದ್ದೇ ಆದರೆ, ಮೋದಿ...ಮೋದಿ ಎಂದು ಜಪ ಮಾಡಲು ನಾನು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಹೋರಾಟದ ವೇಳೆ ಅಣ್ಣಾ ಹಜಾರೆ ಜೊತೆಗೂಡಿ ನಾವು ನಮ್ಮ ಜೀವವನ್ನು ಆಪಾಯಕ್ಕೆ ಸಿಲುಕಿಸಿದ್ದೆವು. ಸ್ವಚ್ಛ ಭಾರತ ಅಭಿಯಾನ ಹಾಗೂ ಯೋಗ ದಿನ, ಸೀಮಿತ ದಾಳಿಯಂತಹ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ತಮ ಕೆಲಸಗಳನ್ನು ನಾವು ಸ್ವಾಗತಿಸಿದ್ದೇವೆ. ಆದರೆ, ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಪ್ರಧಾನಿ ಮೋದಿಯವರು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದೆ. ಈ ಹಿಂದೆ ನೋಟಿನ ಮೇಲೆ ನಿಷೇಧ ಹೇರಿದಾಗ ಇಷ್ಟೊಂದು ದೊಡ್ಡ ಸಮಸ್ಯೆಗಳು ಸೃಷ್ಟಿಯಾಗಿರಲಿಲ್ಲ. ರು.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಮೋದಿಯವರು ತಮ್ಮ ಉದ್ಯಮಿ ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ನೋಟು ನಿಷೇಧದಿಂದ ಸೃಷ್ಟಿಯಾಗಿರುವ ಸಮಸ್ಯೆ ಬಗೆಹರಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 50 ದಿನಗಳ ಕಾಲಾವಕಾಶವನ್ನು ಕೇಳುತ್ತಿದ್ದಾರೆ. ಆದರೆ, ಹಣಕಾಸು ಸಚಿವ ಸಮಸ್ಯೆ ಬಗೆಹರಿಯಲು 6 ತಿಂಗಳು ಕಾಲಾವಕಾಶಬೇಕೆಂದು ಹೇಳುತ್ತಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ, ಸಮಸ್ಯೆ ಬಗೆಹರಿಕೆ ಕುರಿತು ಮೋದಿ ಹಾಗೂ ಜೇಟ್ಲಿಯವರ ಬಳಿಯೇ ಪರಿಹಾರವಿಲ್ಲ ಎಂಬುದು ತಿಳಿಯುತ್ತದೆ.

ಬಿಜೆಪಿ ನೀಡುವ ಶೇ.80 ದಾನಗಳು ನಗದು ರೀತಿಯಲ್ಲಿರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಅದನ್ನು ನಿಲ್ಲಿಸಬೇಕು. ಆಮ್ ಆದ್ಮಿ ಪಕ್ಷ ನೀಡುವ ಶೇ.92 ರಷ್ಟು ದಾನಗಳು ಚೆಕ್ ಹಾಗೂ ಇನ್ನಿತರೆ ವಿಧಾನಗಳ ಮೂಲಕವಾಗಿರುತ್ತದೆ. ಪ್ರಧಾನಿ ಮೋದಿಯವರು ಮದುವೆ ಸಮಾರಂಭಗಳಿಗೆ ರು.2.5 ಲಕ್ಷ ಹಣವನ್ನು ನಿಗದಿ ಮಾಡಿದ್ದಾರೆ. ಮೋದಿಯವರೊಂದಿಗಿರುವ ಸಚಿವರು ಹಾಗೂ ಪಕ್ಷದ ಸಂಸದರು ತಮ್ಮ ಮಕ್ಕಳ ಮದುವೆಗೆ ರು.2.5 ಲಕ್ಷ ಹಣದಲ್ಲಿಯೇ ಮದುವೆ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com