
ನವದೆಹಲಿ: 1997 ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಅನ್ಸಾಲ್ ಸಹೋದರರು ತಾವು ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಉಪಹಾರ್ ಚಿತ್ರಮಂದಿರ ಮಾಲೀಕರಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರು ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಪ್ರಕರಣದ ವಿಚಾರಣೆ ಮುಕ್ತಯವಾಗುವವರೆಗೂ ತಾವು ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಡುವುದಿಲ್ಲ ಎಂದು ಹೇಳಿದ್ದಾರೆ.
1997ರಲ್ಲಿ ನಡೆದಿದ್ದ ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ 2015ರಲ್ಲಿ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಅದರಂತೆ ಅನ್ಸಾಲ್ ಸಹೋದರರು ದುರಂತದ ಸಂತ್ರಸ್ತರಿಗೆ 60 ಕೋಟಿ ರು, ಪಾವತಿ ಮಾಡಬೇಕು ಎಂದು ನ್ಯಾಯಾಲಯ ಹೇಳಿತ್ತು. ಹಣ ಪಾವತಿ ಸಾಧ್ಯವಾಗದಿದ್ದರೆ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿತ್ತು. ನ್ಯಾಯಾಲಯದ ಅದೇಶವನ್ನು ಪ್ರಶ್ನಿಸಿ ಅನ್ಸಾಲ್ ಸಹೋದರರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜೆಎಸ್ ಖೆಹರ್ ಅವರು, ವಿಚಾರಣೆ ಮುಕ್ತಾಯವಾಗುವವರೆಗೂ ದೇಶ ಬಿಡದಂತೆ ಸೂಚಿಸಿದ್ದರು. ನ್ಯಾಯಾಲಯದ ಸೂಚನೆಯನ್ನು ಪಾಲಿಸುವುದಾಗಿ ಅನ್ಸಾಲ್ ಸಹೋದರರು ಒಪ್ಪಿಗೆ ಸೂಚಿಸಿದ್ದಾರೆ.
ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸಮೀಪವಿರುವ ಉಪಹಾರ್ ಚಿತ್ರಮಂದಿರದಲ್ಲಿ 1997 ಜೂನ್ 13ರಂದು "ಬಾರ್ಡರ್" ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಅಗ್ನಿ ಅಕಸ್ಮಿಕದಿಂದಾಗಿ ಸುಮಾರು 59 ಮಂದಿ ಅಸುನೀಗಿದ್ದರು. ಅಲ್ಲದೆ ಘಟನೆಯಲ್ಲಿ ಉಸಿರುಗಟ್ಟಿ ಮತ್ತು ಕಾಲ್ತುಳಿತದಿಂದಾಗಿ ಸುಮಾರು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಚಿತ್ರಮಂದಿರದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರದ ಕಾರಣದಿಂದಲೇ ದುರಂತ ಸಂಭವಿಸಿದೆ ಎಂದು ಆರೋಪಿಸಿ ಉಪಹಾರ್ ಚಿತ್ರಮಂದಿರ ಮಾಲೀಕರಾದ ಅನ್ಸಾಲ್ ಸಹೋದರರ ವಿರುದ್ಧ ಗಾಯಾಳುಗಳ ಮತ್ತು ಮೃತರ ಸಂಬಂಧಿಕರು ದಾವೆ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮೃತರ ಮತ್ತು ಗಾಯಾಳುಗಳ ಸಂಬಂಧಿಕರಿಗೆ 25 ಕೋಟಿ ರು. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ದೆಹಲಿ ನ್ಯಾಯಾಲಯ ಹೇರಿದ ದಂಡದ ಮೊತ್ತ ಹೆಚ್ಚಾಯಿತು ಎಂದು ಅನ್ಸಾಲ್ ಸಹೋದರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
Advertisement